ಸಿಂಧನೂರು | ಗೋಮರ್ಸಿಯಲ್ಲಿ ಅಕ್ರಮ ಮದ್ಯ ಮಾರಾಟ ವಿರೋಧಿಸಿ ಕೆಆರ್‌ಎಸ್ ಪಾರ್ಟಿಯಿಂದ ಪ್ರತಿಭಟನೆ
ಸಿಂಧನೂರು: ತಾಲ್ಲೂಕಿನ ಗೋಮರ್ಸಿ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯಮಾರಾಟವನ್ನು ತಡೆಗಟ್ಟಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ನೇತೃತ್ವದಲ್ಲಿ ಮಹಿಳೆಯರು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕೆಆರ್‌ಎಸ್ ಪಕ್ಷದ ಮುಖಂಡ ನಿರುಪಾದಿ ಕೆ. ಗೋಮರ್ಸಿ ಮಾತನಾಡಿ, ಗ್ರಾಮದಲ್ಲಿ ಕೆಲವರು ಯಾವುದೇ ಪರವಾನಗಿ ಇಲ್ಲದೆ ಸಾರ್ವಜನಿಕ ಸ್ಥಳಗಳು ಹಾಗೂ ವಸತಿ ಪ್ರದೇಶಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಯುವಕರು, ಕಾರ್ಮಿಕರು ಹಾಗೂ ರೈತಾಪಿ ವರ್ಗ ಮದ್ಯವ್ಯಸನಕ್ಕೆ ಒಳಗಾಗುತ್ತಿದ್ದು, ಕುಟುಂಬ ಕಲಹಗಳು ಹಾಗೂ ಸಾರ್ವಜನಿಕ ಅಶಾಂತಿ ಹೆಚ್ಚುತ್ತಿದೆ. ಇದರಿಂದ ಕಾನೂನು ಸುವ್ಯವಸ್ಥೆಗೂ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿದರು.
ಗ್ರಾಮದ ಕಿರಾಣಿ ಅಂಗಡಿಗಳು, ಅಂಗಡಿಗಳ ಮುಗ್ಗಟ್ಟುಗಳು ಹಾಗೂ ಕೆಲವು ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಈ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ದಾಳಿ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಕ್ರಮ ಮದ್ಯಮಾರಾಟ ತಕ್ಷಣ ನಿಲ್ಲಿಸದಿದ್ದಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಿರುಪಮ್ಮ, ಲಕ್ಷ್ಮೀ ಪತ್ತಾರ, ಬಸವರಾಜ ಗೋಡಿಹಾಳ, ದಾವಲಸಾಬ್ ದೊಡ್ಮನಿ, ಶ್ರೀನಿವಾಸ (ಗೋಮರ್ಸಿ), ವೀರೇಶ್ ಸೇರಿದಂತೆ ಮಹಿಳೆಯರು, ಯುವಕರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.