ರಾಯಚೂರು ಜಿಲ್ಲಾ ಉತ್ಸವ–2026 : ಫೆ.6ರಂದು ಜಿಲ್ಲಾ ಮಟ್ಟದ ಉದ್ಯೋಗ ಮೇಳ
ರಾಯಚೂರು :ರಾಯಚೂರು ಜಿಲ್ಲಾ ಉತ್ಸವ–2026ರ ಹಿನ್ನೆಲೆಯಲ್ಲಿ ಜಿಲ್ಲೆಯ ನಿರುದ್ಯೋಗ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಸಂಜೀವಿನಿ ಕೆ.ಎಸ್.ಆರ್.ಎಲ್.ಪಿ.ಎಸ್ ಹಾಗೂ ಡಿಡಿಯು–ಜಿಕೆವೈ ಯೋಜನೆಯಡಿ ಜಿಲ್ಲಾ ಮಟ್ಟದ ಒಂದು ದಿನದ ಉದ್ಯೋಗ ಮೇಳವನ್ನು ಫೆ.6ರಂದು ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದೆ.
ಈ ಉದ್ಯೋಗ ಮೇಳದ ಯಶಸ್ಸಿಗೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಶರಣಬಸವರಾಜ ಅವರು ಸೂಚಿಸಿದರು.
ಜ.30ರಂದು ನಗರದ ಜಿಲ್ಲಾ ಪಂಚಾಯತ್‌ನ ಜಲ ನಿರ್ಮಲ ಸಭಾಂಗಣದಲ್ಲಿ ನಡೆದ ಉದ್ಯೋಗ ಮೇಳದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೇಳವು ಬೆಳಿಗ್ಗೆ 9 ಗಂಟೆಗೆ ಆರಂಭವಾಗಲಿದೆ. ಮೇಳದ ವೇದಿಕೆ ಹಾಗೂ ಸುತ್ತಮುತ್ತ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಹೇಳಿದರು.
ಮೇಳದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಸಾಮಾನ್ಯ ಪದವಿ, ಡಿಪ್ಲೊಮಾ, ಐಟಿಐ, ಎಂಜಿನಿಯರಿಂಗ್, ನರ್ಸಿಂಗ್ ಸೇರಿದಂತೆ ವಿವಿಧ ಅರೆವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದವರಿಗೆ ಉದ್ಯೋಗಾವಕಾಶ ಒದಗಿಸಲಾಗುತ್ತದೆ. ಸಾವಿರಾರು ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆ ಇದ್ದು, ನೂರಾರು ಉದ್ಯೋಗದಾತರು/ಕಂಪನಿಗಳು ಈಗಾಗಲೇ ನೋಂದಣಿ ಮಾಡಿಕೊಂಡಿವೆ. ಇನ್ನೂ ಹೆಚ್ಚಿನ ಕಂಪನಿಗಳು ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಜನವರಿ 30ರ ಬೆಳಿಗ್ಗೆ 10 ಗಂಟೆಯ ವೇಳೆಗೆ 4,967 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ನೋಂದಣಿ ಸಂಖ್ಯೆ ಇನ್ನೂ ಹೆಚ್ಚಳವಾಗಲಿದೆ. ಮೇಳದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ಆಫರ್ ಲೆಟರ್ ನೀಡಲಾಗುವುದು ಎಂದು ಹೇಳಿದರು.
ಉದ್ಯೋಗಾಕಾಂಕ್ಷಿಗಳು https://udyogamela.ksdckarnataka.com ಜಾಲತಾಣದ ಮೂಲಕ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡು ಮೇಳದಲ್ಲಿ ಭಾಗವಹಿಸಬಹುದು. ಅದೇ ರೀತಿ ಉದ್ಯೋಗದಾತರು/ಕಂಪನಿಗಳು ತಮ್ಮಲ್ಲಿ ಲಭ್ಯವಿರುವ ಖಾಲಿ ಹುದ್ದೆಗಳ ಮಾಹಿತಿಯೊಂದಿಗೆ https://employer.ksdckarnataka.com/login ಜಾಲತಾಣದಲ್ಲಿ ನೋಂದಣಿ ಮಾಡಿಕೊಂಡು ಮೇಳದಲ್ಲಿ ಭಾಗವಹಿಸಬಹುದು. ಈ ಕುರಿತು ಹೆಚ್ಚಿನ ಪ್ರಚಾರ ನೀಡುವಂತೆ ಸೂಚಿಸಿದರು.
ಸಭೆಯಲ್ಲಿ ಸಿಡಾಕ್ ಜಂಟಿ ನಿರ್ದೇಶಕ ಜಿ.ಯು. ಹುಡೇದ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಉಪ ನಿರ್ದೇಶಕ ರಾಜಕುಮಾರ್ ಪಾಟೀಲ್, ಜಿಲ್ಲಾ ಉದ್ಯೋಗಾಧಿಕಾರಿ ನವೀನ್ ಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವ್ಯವಸ್ಥಾಪಕ ಸಂತೋಷ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಕಾರ್ಯದರ್ಶಿ ಜಂಬಣ್ಣ, ಎಸ್‌ಬಿಐ ಆರ್‌ಸೆಟ್ ನಿರ್ದೇಶಕ ವಿಜಯಕುಮಾರ್, ಜಿಲ್ಲೆಯ ವಿವಿಧ ಐಟಿಐ ಕಾಲೇಜುಗಳ ಮುಖ್ಯಸ್ಥರಾದ ಶಿವರಾಜ ಕುಮಾರ್, ರುದ್ರಗೌಡ, ಹೈದರಾಸಾಬ್, ತೋಮಸಪ್ಪ, ರಾಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.