×
Ad

ಕಾರ್ಮಿಕ ಸಂಹಿತೆ ವಿರೋಧಿಸಿ ರಾಯಚೂರಿನಲ್ಲಿ ಎಐಸಿಸಿಟಿಯು ವತಿಯಿಂದ ಜೈಲ್ ಭರೋ ಚಳವಳಿ

ಚಳವಳಿಗಾರರ ಬಂಧನ-ಬಿಡುಗಡೆ

Update: 2026-01-30 15:06 IST


ರಾಯಚೂರು : ಕಾರ್ಮಿಕ ವಿರೋಧಿ ಎಂದು ಆರೋಪಿಸಲಾದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು ಹಾಗೂ ನರೇಗಾ ಯೋಜನೆಯಲ್ಲಿ ಮಾಡಿರುವ ಬದಲಾವಣೆಗಳನ್ನು ಖಂಡಿಸಿ ಎಐಸಿಸಿಟಿಯು (AICCTU) ವತಿಯಿಂದ ನಗರದಲ್ಲಿ ಜೈಲ್ ಭರೋ ಚಳವಳಿ ನಡೆಸಲಾಯಿತು.

ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕಾರ್ಮಿಕ ಸಂಘಟನೆಯ ಮುಖಂಡರು ಮತ್ತು ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜೈಲು ಕಡೆಗೆ ಹೊರಟಿದ್ದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ವಾಹನಗಳ ಮೂಲಕ ಕರೆದೊಯ್ದರು.

ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, ಕೇಂದ್ರ ಸರ್ಕಾರ ರೈತ ಹಾಗೂ ಕಾರ್ಮಿಕ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ. ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದು ಕಾರ್ಮಿಕರ ಶೋಷಣೆಗೆ ಅವಕಾಶ ಮಾಡಿಕೊಟ್ಟಿದೆ. ಇವುಗಳು ಬಂಡವಾಳಶಾಹಿ ಪರ ಕಾನೂನುಗಳಾಗಿದ್ದು, ಹಳೆಯ ಕಾರ್ಮಿಕ ಕಾನೂನುಗಳನ್ನೇ ಮುಂದುವರೆಸಬೇಕು ಎಂದು ಒತ್ತಾಯಿಸಿದರು.

ನಾಲ್ಕು ಕಾರ್ಮಿಕ ಸಂಹಿತೆಗಳ ವಿರುದ್ಧ ದೇಶಾದ್ಯಂತ ಅನೇಕ ಹೋರಾಟಗಳು ನಡೆದಿದ್ದರೂ, ಸರ್ಕಾರ ಯಾವುದೇ ಚರ್ಚೆ ಇಲ್ಲದೇ ಏಕಪಕ್ಷೀಯವಾಗಿ ಅವುಗಳನ್ನು ಜಾರಿಗೊಳಿಸಿದೆ ಎಂದು ದೂರಿದರು.

ಫೆ.12ರ ಅಖಿಲ ಭಾರತ ಮುಷ್ಕರಕ್ಕೆ ಕರೆ :

ಎಐಸಿಸಿಟಿಯು ವತಿಯಿಂದ ಫೆ.12ರಂದು ನಡೆಯಲಿರುವ ಅಖಿಲ ಭಾರತ ಮುಷ್ಕರದ ಭಾಗವಾಗಿ, ಜಿಲ್ಲೆಯಾದ್ಯಂತ ಪ್ರಚಾರಾಂದೋಲನ ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ಇಂದು ರಾಯಚೂರು ನಗರದಲ್ಲಿ ಜೈಲ್ ಭರೋ ಚಳವಳಿ ನಡೆಸಿ ಮುಷ್ಕರವನ್ನು ಯಶಸ್ವಿಗೊಳಿಸಲು ಕರೆ ನೀಡಲಾಯಿತು.

ಈ ಜೈಲ್ ಭರೋ ಚಳವಳಿಗೆ ಎಐಸಿಸಿಟಿಯು ಜಿಲ್ಲಾಧ್ಯಕ್ಷ ಅಜೀಜ್ ಜಾಗೀರದಾರ ನೇತೃತ್ವ ವಹಿಸಿದ್ದರು.

ಚಳವಳಿಯಲ್ಲಿ ಕಾರ್ಮಿಕ ಮುಖಂಡರಾದ ಜಗದೀಶ್, ನಿಸಾರ್ ಅಹಮದ್, ಭೀಮಣ್ಣ ಉಡುಮಗಲ್, ಮಾರಣ್ಣ ಆಶಾಪುರ, ಚಾಂದ್ ಪಾಷಾ, ಅನಿಫ್ ಅಬಕಾರಿ, ಹನುಮಪ್ಪ, ಮಲ್ಲೇಶ್, ಯಲ್ಲಪ್ಪ ಸೇರಿದಂತೆ ಅನೇಕ ಕಾರ್ಮಿಕರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News