×
Ad

ರಾಯಚೂರು | ಬಿಸಿಯೂಟ ನೌಕರರಿಂದ ಪ್ರತಿಭಟನೆ

Update: 2026-01-30 22:15 IST

ರಾಯಚೂರು: ಸರಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ತರಕಾರಿ, ಬಾಳೆಹಣ್ಣು ಹಾಗೂ ಮೊಟ್ಟೆಗಳ ಸರಬರಾಜನ್ನು ಸ್ವ-ಸಹಾಯ ಗುಂಪುಗಳಿಗೆ ನೀಡಲು ಜಿಲ್ಲಾ ಪಂಚಾಯತ್ ಮುಂದಾಗಿರುವ ನಿರ್ಧಾರವನ್ನು ಖಂಡಿಸಿ, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ನೌಕರರ ಜಿಲ್ಲಾ ಸಮಿತಿಯಿಂದ ಶುಕ್ರವಾರ ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕಳೆದ 24 ವರ್ಷಗಳಿಂದ ಅತಿ ಕಡಿಮೆ ಸಂಬಳಕ್ಕೆ ಹೆಚ್ಚುವರಿ ಹೊಣೆಗಾರಿಕೆಯನ್ನು ಹೊತ್ತು ಕೆಲಸ ಮಾಡುತ್ತಿರುವ ಬಿಸಿಯೂಟ ನೌಕರರ ಶ್ರಮವನ್ನು ಕಡೆಗಣಿಸಿ, ಯಾವುದೇ ಪೂರ್ವ ಚರ್ಚೆ ನಡೆಸದೇ ಸ್ವ-ಸಹಾಯ ಗುಂಪುಗಳಿಗೆ ಸರಬರಾಜು ವಹಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದು ಸಂಪೂರ್ಣವಾಗಿ ನೌಕರ ವಿರೋಧಿ ನಡೆಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈವರೆಗೆ ಶಾಲಾ ಮುಖ್ಯೋಪಾಧ್ಯಾಯರ ಸಹಕಾರದೊಂದಿಗೆ ಬಿಸಿಯೂಟ ನೌಕರರೇ ತರಕಾರಿ, ಹಣ್ಣು ಹಾಗೂ ಮೊಟ್ಟೆಗಳನ್ನು ಖರೀದಿಸಿ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುತ್ತಿದ್ದರು. ಈ ವ್ಯವಸ್ಥೆ ಸುಗಮವಾಗಿ ನಡೆಯುತ್ತಿರುವಾಗಲೇ ಹೊಸದಾಗಿ ಸ್ವ-ಸಹಾಯ ಗುಂಪುಗಳನ್ನು ತರುವ ಮೂಲಕ ಯೋಜನೆಯನ್ನು ಖಾಸಗೀಕರಣ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಮರಿಯಮ್ಮ ಮಾತನಾಡಿ, ಮಹಿಳಾ ಸಬಲೀಕರಣದ ಹೆಸರಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ. ಆದರೆ ಬಿಸಿಯೂಟ ನೌಕರರಲ್ಲಿ ಬಹುಪಾಲು ಮಹಿಳೆಯರೇ ಇರುವುದನ್ನು ಅಧಿಕಾರಿಗಳು ಮರೆತಿದ್ದಾರೆ. ಈ ನಿರ್ಧಾರದಿಂದ ನಮ್ಮ ಉದ್ಯೋಗ ಭದ್ರತೆಗೆ ಧಕ್ಕೆಯಾಗುವ ಆತಂಕ ಎದುರಾಗಿದೆ ಎಂದು ಹೇಳಿದರು.

ಹೀಗಾಗಿ ಸ್ವ-ಸಹಾಯ ಗುಂಪುಗಳಿಗೆ ತರಕಾರಿ, ಬಾಳೆಹಣ್ಣು ಹಾಗೂ ಮೊಟ್ಟೆಗಳ ಸರಬರಾಜು ನೀಡುವ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು ಎಂದು ಸಂಘಟನೆ ಒತ್ತಾಯಿಸಿತು.

ಈ ಸಂದರ್ಭದಲ್ಲಿ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೆಸ್ತಾ, ಪ್ರಧಾನ ಕಾರ್ಯದರ್ಶಿ ಮರಿಯಮ್ಮ, ಜಿಲ್ಲಾ ಅಧ್ಯಕ್ಷೆ ರೆಣುಕಮ್ಮ, ಸಿಐಟಿಯು ಜಿಲ್ಲಾ ಅಧ್ಯಕ್ಷ ಹೆಚ್. ಪದ್ಮ, ಪ್ರಧಾನ ಕಾರ್ಯದರ್ಶಿ ಡಿ.ಎಸ್. ಶರಣಬಸವ, ಖಜಾಂಚಿ ಮುಹಮ್ಮದ್ ಹನೀಫ್ ಸೇರಿದಂತೆ ಅನೇಕ ಬಿಸಿಯೂಟ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News