ನೂಲಿ ಗಿರಣಿ ಕಾರ್ಮಿಕರಿಗೆ ಬಾಕಿ ವೇತನ, ಭತ್ಯೆ ನೀಡದೇ ಅನ್ಯಾಯ : ತಿಂಗಳಲ್ಲಿ ವೇತನ ಪಾವತಿಸದಿದ್ದಲ್ಲಿ ನ್ಯಾಯಾಲಯದ ಮೊರೆ
ರಾಯಚೂರು : ಯರಮರಸ್ ನೂಲಿ ಗಿರಣಿಯಲ್ಲಿ ಕೆಲಸ ಮಾಡಿದ್ದ ಸುಮಾರು 550 ಕಾರ್ಮಿಕರಿಗೆ ಬಾಕಿ ವೇತನ, ಗ್ರಾಚ್ಯುಟಿ ಹಾಗೂ ಪಿಎಫ್ ಹಣ ಪಾವತಿಸದೆ ವಂಚಿಸಲಾಗಿದ್ದು, ಜೊತೆಗೆ ಸರ್ಕಾರಿ ಭೂಮಿಯನ್ನು ಅನಧಿಕೃತವಾಗಿ ಹರಾಜು ಮಾಡಿ ಗಂಭೀರ ಅನ್ಯಾಯ ಮಾಡಲಾಗಿದೆ. ಒಂದು ತಿಂಗಳೊಳಗೆ ಪ್ರಕರಣ ಇತ್ಯರ್ಥಗೊಳಿಸದಿದ್ದಲ್ಲಿ ನ್ಯಾಯಾಂಗ ಮೊರೆ ಹೋಗುವುದರ ಜೊತೆಗೆ ಕಾರ್ಮಿಕರ ಅನಿರ್ದಿಷ್ಟ ಹೋರಾಟ ನಡೆಸಲಾಗುವುದು ಎಂದು ಹೋರಾಟಗಾರ ಶಿವಕುಮಾರ ಮ್ಯಾಗಳಮನಿ ಎಚ್ಚರಿಕೆ ನೀಡಿದರು.
ಅವರು ಮಂಗಳವಾರ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ, ಸರ್ಕಾರಿ ಜಮೀನಿನಲ್ಲಿ ಸ್ಥಾಪಿತವಾಗಿದ್ದ ಸಹಕಾರಿ ನೂಲಿ ಗಿರಣಿಯನ್ನು 1997ರಲ್ಲಿ ಮುಚ್ಚಲಾಗಿದ್ದು, ಗಿರಣಿಗೆ ಮಾಲಕತ್ವವೇ ಇಲ್ಲದಿದ್ದರೂ ಸಹಕಾರಿ ಇಲಾಖೆ ಅಧಿಕಾರಿಗಳು 40 ಎಕರೆ 25 ಗುಂಟೆ ಸರ್ಕಾರಿ ಭೂಮಿಯನ್ನು ಖಾಸಗಿ ಕಂಪನಿಗಳಿಗೆ ಹರಾಜು ಮಾಡಿದ್ದಾರೆ ಎಂದು ಆರೋಪಿಸಿದರು.ಸರ್ವೆ ನಂ.55/1 ರಲ್ಲಿ ಒಂದು ಎಕರೆ, 16ಎ ಯಲ್ಲಿ 35 ಗುಂಟೆ, ಸರ್ಕಾರಿ ಗೈರಾಣಿ 55/2ಸಿ ಯಲ್ಲಿ 6 ಎಕರೆ 13 ಗುಂಟೆ, ಏಗನೂರು ಗ್ರಾಮದ ಸರ್ವೆ ನಂ.254/3/2 ರಲ್ಲಿ 17 ಎಕರೆ 37 ಗುಂಟೆ ಹಾಗೂ ಸರ್ವೆ ನಂ.254/4 ರಲ್ಲಿ 1 ಎಕರೆ 20 ಗುಂಟೆ ಸೇರಿ ಒಟ್ಟು 40 ಎಕರೆ 25 ಗುಂಟೆ ಭೂಮಿ ನೂಲಿ ಗಿರಣಿಗೆ ಮಂಜೂರಾಗಿರಲಿಲ್ಲ ಎಂದು ವಿವರಿಸಿದರು.
ಈ ಸರ್ಕಾರಿ ಜಮೀನನ್ನು ಬಸಂತ ಟೆಕ್ಸಟೈಲ್ ಕಂಪನಿ, ಮರ್ಸೆಂಟೈಲ್ ಹಾಗೂ ಮೋಹಿನಿ ಇನ್ಫ್ರಾ ಕಂಪನಿಗಳಿಗೆ ಹರಾಜು ಮಾಡಲಾಗಿದೆ. 2011ರಲ್ಲಿ ಸಹಾಯಕ ಆಯುಕ್ತರು ಈ ಭೂಮಿ ಕರ್ನಾಟಕ ಸರ್ಕಾರಕ್ಕೆ ಸೇರಿದ್ದೆಂದು ದಾಖಲಿಸಿದ್ದರೂ, 2017–18ರಲ್ಲಿ ದೀಪಕ್ ಇನ್ನಾಣಿ ಹೆಸರನ್ನು ಪಹಣಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಆದರೆ ಗಿರಣಿಯ ಕಾರ್ಮಿಕರಿಗೆ ಇಂದಿಗೂ ಬಾಕಿ ವೇತನ, ಗ್ರಾಚ್ಯುಟಿ ಹಾಗೂ ಪಿಎಫ್ ಹಣ ಪಾವತಿಯಾಗಿಲ್ಲ ಎಂದು ದೂರಿದರು.
550 ಕಾರ್ಮಿಕರಿಗೆ ನ್ಯಾಯ ಒದಗಿಸಲು ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಪ್ರಕರಣವನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು. ಇಲ್ಲದಿದ್ದರೆ ಜಿಲ್ಲಾಮಟ್ಟದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಇ. ನಸದುಲ್ಲಾ, ರುದ್ರಗೌಡ, ಕೃಷ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.