ರಾಯಚೂರು | ಕುಡಿಯುವ ನೀರಿನ ಪೈಪ್‍ಲೈನ್ ದುರಸ್ತಿಗೆ ಸಮಾಜ ಸೇವಾ ಸಂಘ ಒತ್ತಾಯ
ರಾಯಚೂರು: ನಗರದ ವಾರ್ಡ್ ನಂ.28 ಮತ್ತು 29ರಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ಗಳು ಒಡೆದು ಹೋಗಿರುವುದರಿಂದ ಹಾಗೂ ಕಸ ವಿಲೇವಾರಿ ಮತ್ತು ಚರಂಡಿ ಸ್ವಚ್ಛತೆ ಸರಿಯಾಗಿ ನಡೆಯದ ಕಾರಣ ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಣವಾಗುತ್ತಿದೆ. ಈ ಸಮಸ್ಯೆಗೆ ಕೂಡಲೇ ಪರಿಹಾರ ಕಂಡುಕೊಳ್ಳುವಂತೆ ಸಮಾಜ ಸೇವಾ ಸಂಘದಿಂದ ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ ಅವರಿಗೆ ಮನವಿ ಸಲ್ಲಿಸಲಾಯಿತು.
ನಗರದ ವಾರ್ಡ್ ನಂ.28 ಮತ್ತು 29ರಲ್ಲಿ ಪೂರೈಕೆಯಾಗುತ್ತಿರುವ ಕುಡಿಯುವ ನೀರು ಕಲುಷಿತವಾಗಿ ಬರುತ್ತಿದ್ದು, ಇದಕ್ಕೆ ಪ್ರಮುಖ ಕಾರಣ ಪೈಪ್‌ಲೈನ್‌ಗಳಲ್ಲಿ ಉಂಟಾಗಿರುವ ಲೀಕೇಜ್ ಹಾಗೂ ಚರಂಡಿ ಸ್ವಚ್ಛತೆ, ಕಸ ವಿಲೇವಾರಿಯಲ್ಲಿ ನಿರ್ಲಕ್ಷ್ಯವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಅದರಂತೆ, ಕೂಡಲೇ ಕುಡಿಯುವ ನೀರಿನ ಪೈಪ್‌ಲೈನ್‌ಗಳನ್ನು ದುರಸ್ತಿ ಮಾಡಿಸಿ, ಚರಂಡಿ ಸ್ವಚ್ಛತೆ ಹಾಗೂ ಕಸ ವಿಲೇವಾರಿ ಕಾರ್ಯಗಳನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೆ. ವೀರೇಶ, ರಾಜು, ಖತಲ್, ರಾಘು, ಆಸೀಫ್, ನಿಜಾಮ್, ಕಮೂರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.