×
Ad

ಭಿಕ್ಷೆ ಬೇಡಿದ ಹಣದಲ್ಲಿಯೇ ಸಾಮೂಹಿಕ ವಿವಾಹ ಮಾಡಿಸುವ ಜಮುನಾ

Update: 2025-02-12 00:05 IST

ರಾಯಚೂರು : ಮಂಗಳಮುಖಿಯೋರ್ವರು ಐದು ವರ್ಷಗಳಿಂದ ತಮ್ಮ ಸ್ವಂತ ಖರ್ಚಿನಲ್ಲಿ ಸಾಮೂಹಿಕ ವಿವಾಹ ನಡೆಸುತ್ತಾ ಬಂದಿರುವುದು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಜಮುನಾ ಎಂಬ ಮಂಗಳಮುಖಿ ಪ್ರತೀ ವರ್ಷ ಬಡ ಕುಟುಂಬಗಳನ್ನು ಗುರುತಿಸಿ, ಮದುವೆಗೆ ಬೇಕಾದ ಮಾಂಗಲ್ಯ, ಕಾಲುಂಗರ, ಬಟ್ಟೆಗಳು ಸೇರಿದಂತೆ ಎಲ್ಲವನ್ನು ಉಚಿತವಾಗಿ ನೀಡುತ್ತಿದ್ದಾರೆ. ಮದುವೆಯಾಗುವ ಜೋಡಿಯ ಕುಟುಂಬದಿಂದ ಯಾವುದೇ ಹಣವನ್ನು ಪಡೆಯದೇ ಅನ್ನದಾಸೋಹದಿಂದ ಹಿಡಿದು ಎಲ್ಲವನ್ನು ಉಚಿತವಾಗಿ ಮಾಡುತ್ತಾ ಬರಲಾಗಿದೆ. ಜಮುನಾ ಅವರಿಗೆ ಕೆಲ ಮಂಗಳಮುಖಿಯರು ಸಾಥ್ ನೀಡುತ್ತಿದ್ದಾರೆ.

ಜಮುನಾ ಅವರ ವತಿಯಿಂದ ಸಿಂಧನೂರು ತಾಲೂಕಿನ ಹೊಸಳ್ಳಿಕ್ಯಾಂಪ್‌ನ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇತ್ತೀಚೆಗೆ ಐದು ಜೋಡಿಗಳ ಉಚಿತ ಸಾಮೂಹಿಕ ನಡೆಯಿತು. ಮದುವೆಯ ಧಾರ್ಮಿಕ ವಿಧಿ ವಿಧಾನಗಳನ್ನು ಜಮುನಾ ಅವರೇ ಮುಂದೆ ನಿಂತು ಮಾಡಿರುವುದು ವಿಶೇಷ. ವೆಂಕಟಗಿರಿ ಕ್ಯಾಂಪ್ ಸಿದ್ದಾಶ್ರಮದ ಸದಾನಂದ ಶರಣರು ಹಾಗು ವಧು-ವರನ ಕಡೆಯ ಕುಟುಂಬದವರು ಮದುವೆಗೆ ಸಾಕ್ಷಿಯಾಗಿ ಶುಭಹಾರೈಸಿದ್ದಾರೆ.

ಶಾಲಾ ಮಕ್ಕಳಿಗೂ ನೆರವು :

ಕೇವಲ ಮದುವೆ ಮಾಡಿಸುವುದಷ್ಟೇ ಅಲ್ಲ, ಸರಕಾರಿ ಶಾಲೆಗಳಿಗೆ ಪೀಠೋಪಕರಣಗಳನ್ನು ನೀಡುವುದು, ಬಡ ವಿದ್ಯಾರ್ಥಿಗಳಿಗೆ ಪಠ್ಯ ಸಾಮಗ್ರಿಗಳ ವಿತರಣೆಯನ್ನು ಜಮುನಾ ಮಾಡುತ್ತಿದ್ದಾರೆ.

ನಾವಂತೂ ಮದುವೆ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ. ಆದರೆ ವಿವಾಹ ಕಾರ್ಯ ಮಾಡಲು ಈಗಿನ ಕಾಲದಲ್ಲಿ ಬಡವರು ಅನೇಕ ಸಂಕಷ್ಟ ಎದುರಿಸುತ್ತಿದ್ದಾರೆ. ಬಡ ತಂದೆ ತಾಯಿಯರಿಗೆ ಹೆಣ್ಣುಮಕ್ಕಳು ಹೊರೆಯಾಗದಿರಲಿ ಎಂಬ ಆಶಯದೊಂದಿಗೆ ಉಚಿತವಾಗಿ ವಿವಾಹ ಮಾಡಿಸುತ್ತಿದ್ದೇನೆ. ಭಿಕ್ಷೆ ಬೇಡಿ ಉಳಿದ ಹಣದಲ್ಲಿಯೇ ಸಮಾಜಸೇವೆ ಮಾಡುತ್ತಿದ್ದೇನೆ. 5 ವರ್ಷಗಳಿಂದ ಸಾಮೂಹಿಕ ವಿವಾಹ ಮಾಡಿಸುತ್ತಿದ್ದು, ಒಟು 17 ಜೋಡಿಗಳಿಗೆ ವಿವಾಹ ಮಾಡಿಸಿದ್ದೇನೆ.

-ಜಮುನಾ, ಮಂಗಳಮುಖಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾವಸಲಿ, ರಾಯಚೂರು

contributor

Similar News