ರಾಯಚೂರು | ಜಿಲ್ಲೆಯ ರೈತರಿಗೆ ಎರಡನೇ ಬೆಳೆಗೆ ನೀರು ನೀಡಲು ಸಾಧ್ಯವಿಲ್ಲ ಎಂಬ ರಾಜ್ಯ ಸರಕಾರದ ಹೇಳಿಕೆ ಖಂಡನೀಯ : ಮಾಜಿ ಸಚಿವ ವೆಂಕಟರಾವ್ ನಾಡಗೌಡ
ರಾಯಚೂರು : ತುಂಗಭದ್ರಾ ಜಲಾಶಯದಲ್ಲಿ 70 ಟಿಎಂಸಿ ನೀರು ಇದ್ದರೂ, ಜಿಲ್ಲೆಯ ರೈತರಿಗೆ ಎರಡನೇ ಬೆಳೆಗೆ ನೀರು ನೀಡಲು ಸಾಧ್ಯವಿಲ್ಲ ಎಂಬ ರಾಜ್ಯ ಸರ್ಕಾರ ಹಾಗೂ ನೀರಾವರಿ ಸಚಿವರ ಹೇಳಿಕೆ ಖಂಡನೀಯ ಎಂದು ಮಾಜಿ ಸಚಿವ ವೆಂಕಟರಾವ್ ನಾಡಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಅವರು ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದ 14 ಗೇಟ್‌ಗಳ ಕಾಮಗಾರಿ ನಡೆಯುತ್ತಿದೆ. ಗುತ್ತಿಗೆ ಪಡೆದ ಕಂಪನಿ ಅ.15ರೊಳಗೆ ಕಾಮಗಾರಿ ಮುಗಿಸುವುದಾಗಿ ಹೇಳಿತ್ತು. ಆದರೆ, ಇದೀಗ ಕೇವಲ 9 ಗೇಟ್‌ಗಳ ಕಾಮಗಾರಿ ಪೂರ್ಣಗೊಂಡಿದೆ. 10 ಕೋಟಿ ರೂಪಾಯಿ ಖರ್ಚು ಮಾಡಿದರೂ ಸರ್ಕಾರದಿಂದ ಇದುವರೆಗೆ ಪಾವತಿ ಆಗಿಲ್ಲವೆಂದು ಗುತ್ತಿಗೆದಾರರು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಕಾಮಗಾರಿ ಶೀಘ್ರ ಪೂರ್ಣಗೊಂಡರೆ ರೈತರಿಗೆ ಎರಡನೇ ಬೆಳೆಗೆ ನೀರಾವರಿ ನೀಡಲು ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಪಕ್ಷಾತೀತವಾಗಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಸಿಂಧನೂರಿನಲ್ಲಿ ಸಭೆ ನಡೆಸಿದ್ದಾರೆ ಎಂದು ತಿಳಿಸಿದರು.
ಅಕಾಲಿಕ ಮಳೆಯಿಂದ ರೈತರು ಈಗಾಗಲೇ ನಷ್ಟ ಅನುಭವಿಸಿದ್ದಾರೆ. ಮುಂಗಾರು ಬೆಳೆ ಕೈಗೆಟಕುವ ಭರವಸೆ ಇಲ್ಲದ ಸ್ಥಿತಿಯಲ್ಲಿ ಎರಡನೇ ಬೆಳೆಗೆ ನೀರು ನೀಡದಿದ್ದರೆ ರೈತರು ಬದುಕುವುದು ಕಷ್ಟ. ನೀರಿನ ತಜ್ಞ ಕನ್ನಯ್ಯನಾಯ್ಡು ಅವರು ಎರಡನೇ ಬೆಳೆಗೆ ನೀರು ನೀಡಬಹುದು ಎಂದು ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಕುರಿತು ನಾನು ಅ.27 ರಂದು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಎಂದರು.
ತಜ್ಞರು ನೀರಾವರಿ ಸಾಧ್ಯವೆಂದು ಹೇಳಿದರೂ ಸರ್ಕಾರದ ದ್ವಂದ್ವ ನಿಲುವು ಅರ್ಥವಾಗುತ್ತಿಲ್ಲ. ನಾಳೆ ಜಿಲ್ಲೆಗೆ ಬರುವ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲರಿಗೆ ಮನವಿ ಸಲ್ಲಿಸಲಾಗುವುದು. ನ.3ರಂದು ಪಕ್ಷಾತೀತ ನಿಯೋಗವಾಗಿ ಬೆಂಗಳೂರಿಗೆ ತೆರಳಿ ನೀರು ಬಿಡುಗಡೆ ಮಾಡಲು ಸರ್ಕಾರಕ್ಕೆ ಮನವರಿಕೆ ಮಾಡಲಾಗುವುದು. ಸರ್ಕಾರ ಸ್ಪಂದಿಸದಿದ್ದರೆ ನ.5ರಂದು ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತೀವ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ, ಮಾಜಿ ಶಾಸಕರು ವೆಂಕಟಪ್ಪ ನಾಯಕ, ಪ್ರತಾಪಗೌಡ ಪಾಟೀಲ, ಬಸನಗೌಡ ಬ್ಯಾಗವಾಟ, ಮಾಜಿ ಸಂಸದ ಬಿ.ವಿ. ನಾಯಕ ಹಾಗೂ ವಿರೂಪಾಕ್ಷಪ್ಪ ಹಾಜರಿದ್ದರು.