ರಾಯಚೂರು | ಕನಕದಾಸರ ಜಯಂತಿ ಅಂಗವಾಗಿ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ಆಯೋಜನೆ : ಕಾಶಿನಾಥ್
ರಾಯಚೂರು: ಜಿಲ್ಲಾ ಖಾಸಗಿ ಶಾಲೆಗಳ ಹಾಗೂ ದೈಹಿಕ ಶಿಕ್ಷಕರ ಸಂಘಟನೆಯಿಂದ ಕನಕದಾಸರ 538ನೇ ಜಯಂತಿಯ ಪ್ರಯುಕ್ತ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ಕಾಶಿನಾಥ್ ಹೇಳಿದರು.
ಅವರಿಂದು ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಭಕ್ತ ಕನಕದಾಸರ ಜಯಂತಿಯ ಅಂಗವಾಗಿ ನ.7ರಂದು ಸಂಜೆ 4 ಗಂಟೆಯಿಂದ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ರಾಜ್ಯಮಟ್ಟದ ಈ ಸ್ಪರ್ಧೆಯಲ್ಲಿ ಕರ್ನಾಟಕದ ವಿವಿದ ಜಿಲ್ಲೆಯ ಕಬ್ಬಡ್ಡಿ ತಂಡಗಳು ಭಾಗವಹಿಸಲಿದ್ದು, ರಾಜ್ಯದ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಈಗಾಗಲೇ 25 ತಂಡಗಳು ನೊಂದಾಯಿಸಿಕೊಂಡಿದ್ದು, ಶುಕ್ರವಾರ ನಡೆಯಲಿರುವ ಸ್ಪರ್ಧೆಯಲ್ಲಿ ರಾಜ್ಯದ 45ಕ್ಕೂ ಹೆಚ್ಚಿನ ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ. ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿದ ತಂಡಕ್ಕೆ 30 ಸಾವಿರ ರೂ., ದ್ವಿತೀಯ ಸ್ಥಾನಕ್ಕೆ 20 ಸಾವಿರ ರೂ. ಹಾಗೂ ತೃತೀಯ ಸ್ಥಾನಕ್ಕೆ 10 ಸಾವಿರ ರೂ. ಗಳ ಬಹುಮಾನ ಹಾಘೂ ಟ್ರೋಫಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ ಎಂದರು.
ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಂದ್ಯಾವಳಿಯನ್ನು ವೀಕ್ಷಿಸಲು ಆಗಮಿಸಿ, ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಲಕ್ಷ್ಮಣ ಸಿಂಗ್, ಅಮೀರ್ ಬಹೂದ್ದೂರ, ಉರುಕುಂದಪ್ಪ, ಮಲ್ಲೇಶ ನಾಯಕ, ರಮೇಶ ಸೇರಿದಂತೆ ಅನೇಕರಿದ್ದರು.