×
Ad

ರಾಯಚೂರು ಜಿಲ್ಲಾ ಉತ್ಸವಕ್ಕೆ ಸಕಲ ಸಿದ್ಧತೆ, 1 ಲಕ್ಷ ಜನ ಭಾಗವಹಿಸುವ ನಿರೀಕ್ಷೆ : ಜಿಲ್ಲಾಧಿಕಾರಿ ನಿತೀಶ್ ಕೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಂದ ಉತ್ಸವಕ್ಕೆ ಚಾಲನೆ

Update: 2026-02-03 19:34 IST

ರಾಯಚೂರು : ಫೆ.5ರಿಂದ 7ರವರೆಗೆ ರಾಯಚೂರಿನಲ್ಲಿ ನಡೆಯಲಿರುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವಕ್ಕೆ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ಉತ್ಸವವನ್ನು ಅಚ್ಚುಕಟ್ಟಾಗಿ ನಡೆಸಲು ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸ್ವಯಂಸೇವಕರು ಸೇರಿ ಸುಮಾರು 500 ಜನ ಕಾರ್ಯನಿರ್ವಹಿಸಲಿದ್ದಾರೆ. ಮೂರು ದಿನಗಳ ಉತ್ಸವಕ್ಕೆ 80 ಸಾವಿರದಿಂದ 1 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ತಿಳಿಸಿದರು.

ಜಿಲ್ಲಾ ಉತ್ಸವದ ಅಂಗವಾಗಿ ಫೆ.5ರಂದು ಬೆಳಿಗ್ಗೆ 10 ಗಂಟೆಗೆ ನಗರದ ಕರ್ನಾಟಕ ಸಂಘದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮೂಲಕ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದವರೆಗೆ ಕಲಾತಂಡಗಳೊಂದಿಗೆ ಬೃಹತ್ ಮೆರವಣಿಗೆ ಆಯೋಜಿಸಲಾಗಿದೆ. ಇದರಲ್ಲಿ 50 ಸ್ಥಳೀಯ ಕಲಾತಂಡಗಳು ಭಾಗವಹಿಸಲಿದ್ದು, 300 ಸರ್ಕಾರಿ ನೌಕರರಿಂದ ಬೈಕ್ ರ‍್ಯಾಲಿ ನಡೆಯಲಿದೆ ಎಂದು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಾನಗರ ಪಾಲಿಕೆಗಳ ಸಹಯೋಗದಲ್ಲಿ ವಿವಿಧ ಸಮಿತಿಗಳ ಮೂಲಕ ಉತ್ಸವ ಆಯೋಜಿಸಲಾಗುತ್ತಿದೆ. ಫೆ.5ರಂದು ಸಂಜೆ 6 ಗಂಟೆಗೆ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಮುಖ್ಯ ವೇದಿಕೆಯಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಇತರ ಸಚಿವರು ಭಾಗವಹಿಸಲಿದ್ದಾರೆ.

ಕೃಷಿ ಮೇಳಕ್ಕೂ ಚಾಲನೆ : 

ಈ ಬಾರಿ ಜಿಲ್ಲಾ ಉತ್ಸವದ ಅಂಗವಾಗಿ ಮೂರು ದಿನಗಳ ಕೃಷಿ ಮೇಳವನ್ನು ಆಯೋಜಿಸಲಾಗಿದೆ. ಕೃಷಿ ವಿವಿಯ ನೆಲಮಹಡಿಯಲ್ಲಿ ಮತ್ಸ್ಯ ಮೇಳ, ಮೇಲ್ಮಹಡಿಯಲ್ಲಿ ಫಲ-ಪುಷ್ಪ ಪ್ರದರ್ಶನ ನಡೆಯಲಿದೆ. ಮತ್ಸ್ಯ ಮೇಳಕ್ಕೆ ಕೇಂದ್ರ ಸರ್ಕಾರದಿಂದ 10 ಲಕ್ಷ ರೂ. ಹಾಗೂ ಕೃಷಿ ವಿವಿಯಿಂದ 5 ಲಕ್ಷ ರೂ. ಸೇರಿ ಒಟ್ಟು 15 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ಕೃಷಿಕರಿಗೆ ಪ್ರಶಸ್ತಿ ಪ್ರದಾನ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ನೃತ್ಯ, ಫೈರ್ ಶೋ, ಸಂಜಿತ್ ಹೆಗಡೆ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಮುಖ್ಯ ವೇದಿಕೆ ಸೇರಿದಂತೆ ಐದು ಸಮಾನಂತರ ವೇದಿಕೆಗಳಲ್ಲಿ ಕಾರ್ಯಕ್ರಮಗಳು ಜರುಗಲಿವೆ.

ಮಹಿಳಾ ಸಮಾಜದಲ್ಲಿ ಕವಿಗೋಷ್ಠಿ, ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಕರಕುಶಲ ಪ್ರದರ್ಶನ, ಆಹಾರ ಮೇಳ ಹಾಗೂ ಮಹಿಳಾ ಗೋಷ್ಠಿಗಳು ನಡೆಯಲಿವೆ.

ಫೆ.6ರ ಕಾರ್ಯಕ್ರಮಗಳು :

ಫೆ.6 ರಂದು ಬೆಳಿಗ್ಗೆ 10 ಗಂಟೆಗೆ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಶ್ವಾನ ಪ್ರದರ್ಶನ, ರೈತರಿಂದ ರೈತರ ಕಾರ್ಯಕ್ರಮ, ಉದ್ಯೋಗ ಮೇಳ, ಸ್ಥಳೀಯ ಕಲಾವಿದರಿಂದ ಸಂಗೀತ, ಸಂಜೆ.6.30ಕ್ಕೆ ಡಿಕೆಡಿ ತಂಡದಿಂದ ನೃತ್ಯ ಪ್ರದರ್ಶನ, ಆಳ್ವಾಸ್ ತಂಡದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾಜೇಶ ಕೃಷ್ಣನ್ ತಂಡದಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ.

ಫೆ.7ರ ಕಾರ್ಯಕ್ರಮಗಳು : 

ಫೆ. 7 ರಂದು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಜಿಲ್ಲಾ ಗ್ಯಾರಂಟಿ ಮೇಳ, ಮಧ್ಯಾಹ್ನ 2 ಗಂಟೆಯಿಂದ ರೈತರಿಂದ ರೈತರ ಕಾರ್ಯಕ್ರಮ, ಸ್ಥಳೀಯ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಸಂಜೆ 6 ಗಂಟೆಯಿಂದ ಸಮಾರೋಪ ಸಮಾರಂಭ ನಡೆಯಲಿದೆ. ನಂತರ ಫೈರ್‌ ಶೋ, ಸಂಜೆ 5 ತಂಡದವರಿಂದ ನೃತ್ಯ ಕಾರ್ಯಕ್ರಮ, ಆಲ್‍ಜಿಕೆ ತಂಡವರಿಂದ ಸಂಗೀತ, ನಂತರ ವಿಜಯಪ್ರಕಾಶ ತಂಡವದರಿಂದ ಸಂಗೀತ ಕಾರ್ಯಕ್ರಮ ನಡಯೆಲಿದೆ ಎಂದರು.

ಸ್ವಚ್ಚತೆ ಮತ್ತು ಆರೋಗ್ಯಕ್ಕೆ ವಿಶೇಷ ಒತ್ತು :

ಬೇಸಿಗೆ ಹಿನ್ನೆಲೆ ಹಾಗೂ ನೆರೆ ರಾಜ್ಯಗಳಿಂದ ಹೆಚ್ಚಿನ ಜನರು ಭಾಗವಹಿಸುವ ನಿರೀಕ್ಷೆಯಿಂದ ಕುಡಿಯುವ ನೀರು, ಶೌಚಾಲಯ, ಆರೋಗ್ಯ ಸೇವೆ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಪ್ರತಿ ವೇದಿಕೆಯಲ್ಲಿ ಆರೋಗ್ಯ ಇಲಾಖೆ ತಂಡ, ಆಂಬುಲೆನ್ಸ್ ಹಾಗೂ ಅಗ್ನಿಶಾಮಕ ದಳ, ಮಧ್ಯರಾತ್ರಿವರೆಗೆ ಬಸ್ ವ್ಯವಸ್ಥೆ, ಪೊಲೀಸ್ ಹಾಗೂ ಹೋಂ ಗಾರ್ಡ್ ಭದ್ರತೆ ಕಲ್ಪಿಸಲಾಗಿದೆ.

ಉದ್ಯೋಗ ಮೇಳ–ಆಹಾರ ಮೇಳ :

ಜಿಲ್ಲಾ ಪಂಚಾಯತ್ ಸಿಇಒ ಈಶ್ವರಕುಮಾರ ಕಾಂದೂ ಮಾತನಾಡಿ, ಕೃಷಿ ವಿವಿ ಆವರಣದಲ್ಲಿ ಉದ್ಯೋಗ ಮೇಳ ನಡೆಯಲಿದ್ದು, ರಾಜ್ಯದ 12 ಜಿಲ್ಲೆಗಳ ಆಹಾರ ತಂಡಗಳು ಭಾಗವಹಿಸಲಿವೆ. ತೆಲಂಗಾಣ ಹಾಗೂ ಆಂಧ್ರಪ್ರದೇಶದಿಂದ ಸ್ವಸಹಾಯ ಗುಂಪುಗಳು ಭಾಗವಹಿಸಿ ಕಡಿಮೆ ದರದಲ್ಲಿ ಆಹಾರ ವಸ್ತುಗಳ ಮಾರಾಟ ಹಾಗೂ ಪ್ರದರ್ಶನ ನಡೆಸಲಿವೆ ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಆಯುಕ್ತ ಜೋಬಿನ್ ಮಹೋಪಾತ್ರ ಮಾತನಾಡಿ, ನಗರ ಸ್ವಚ್ಚತೆಗೆ ಆದ್ಯತೆ ನೀಡಲಾಗಿದ್ದು, 100 ಮೊಬೈಲ್ ಶೌಚಾಲಯಗಳ ವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. 350 ಪೌರ ಕಾರ್ಮಿಕರು ಕಾರ್ಯನಿರ್ವಹಿಸಲಿದ್ದಾರೆ ಎಂದರು.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - Reshma

contributor

Similar News