ರಾಯಚೂರು | ಅಕ್ರಮ ಕಲ್ಲುಗಣಿಗಾರಿಕೆ ಆರೋಪ ; ಇಲಾಖೆಯ ಅಧಿಕಾರಿಗಳು ಮೌನ
ರಾಯಚೂರು : ಕೃಷಿ ಹೊಂಡ ನಡೆಸಲು ಪರವಾನಗಿ ಪಡೆದು ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಪರಿಣಾಮ ಸ್ಥಳೀಯರ ಮನೆಗಳು ಬಿರುಕು ಬಿಟ್ಟಿದ್ದು ಈಗ ಆತಂಕದಲ್ಲಿ ಇದ್ದಾರೆ.
ಮಾನ್ವಿ ತಾಲೂಕಿನ ಬೆಟ್ಟದೂರು ಗ್ರಾಮದಲ್ಲಿ ಮೆಸುಚಿತ್ ಮಿಲೇನಿಯಂ ಪ್ರಾಜೆಕ್ಟ್ ಹೆಸರಿನಲ್ಲಿ ಕೃಷಿ ಹೊಂಡದ ಪರವಾನಗಿ ಪಡೆದು ಅನಧಿಕೃತವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಆರೋಪ ಕೇಳಿ ಬಂದಿದೆ. ಹಗಲು ರಾತ್ರಿ ಎಗ್ಗಿಲ್ಲದೇ ಬ್ಲಾಸ್ಟಿಂಗ್ ಮಾಡುವ ಕಾರಣ ಸುತ್ತಮುತ್ತಲಿನ ನಿವಾಸಿಗಳಿಗೆ ನೆಮ್ಮದಿ ಇಲ್ಲದಂತಾಗಿದೆ ಎಂದು ಪೊಲೀಸ್ ಠಾಣೆ ಹತ್ತಿದ್ದಾರೆ ಸ್ಥಳೀಯರು.
ಮಾನ್ವಿ ತಾಲೂಕಿನ ನೀರಮಾನ್ವಿ ಸೀಮಾಂತರದ ಬೆಟ್ಟದೂರು ಗ್ರಾಮದ ಸರ್ವೆ ನಂಬರ್ 55/1 ರಲ್ಲಿ 11.7 ಎಕರೆ ಜಮೀನಿನಲ್ಲಿ ಕೃಷಿ ಹೊಂಡ ಮಾಡಲು ಪರವಾನಗಿ ಪಡೆದು ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ. ಅನೇಕ ರೈತರು ನೀರಾವರಿ ಕಾಲುವೆಯಲ್ಲಿ ನೀರು ಸರಿಯಾಗಿ ಬಾರದ ಕಾರಣ ಮಹಾನಗರಗಳಿಗೆ ಗುಳೆ ಹೋಗಿದ್ದು ಈಗ ಸ್ವಗ್ರಾಮಕ್ಕೆ ಮರಳಿ ಬಂದಾಗ ಮನೆಯ ಸ್ಥಿತಿ ನೋಡಿ ದಂಗಾಗಿದ್ದಾರೆ.
ಬ್ಲಾಸ್ಟಿಂಗ್ ನಿಂದ ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಭಾರಿ ಮಶಿನರಿಗಳ ಸದ್ದಿಗೆ ಮನೆಯಲ್ಲಿನ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿವೆ ಹಾಗೂ ಬಹುತೇಕ ಸಾಮಾನುಗಳು ಹಾಳಾಗಿವೆ. ಧವಸಧಾನ್ಯಗಳು ಮಣ್ಣು ಪಾಲಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಬ್ಲಾಸ್ಟಿಂಗ್ ನಿಂದ ಬೆಳೆ ಹಾನಿ :
ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ 2024ರ ನವೆಂಬರ್ ನಲ್ಲಿ ದೂರು ನೀಡಿದ ಜನಸೇವಾ ಫೌಂಡೇಶನ್ ಜಾವೀದ್ ಖಾನ್ ಅವರು ಪ್ರತಿಕ್ರಿಯಿಸಿ, ಸುಚಿತ್ ಮಿಲೇನಿಯಂ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯವರು ಕೃಷಿಹೊಂಡ ನಿರ್ಮಿಸಿ ರೈತರಿಗೆ ಉದ್ಯೋಗ ನೀಡಲಾಗುವುದೆಂದು ಕಾನೂನು ರೀತಿಯಲ್ಲಿ ಪರವಾನಗಿ ಪಡೆದು ಅನಧಿಕೃತವಾಗಿ ಕಲ್ಲುಗಣಿಗಾರಿಕೆ ಕೆಲಸ ಪ್ರಾರಂಭಿಸಿ ಜನರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಭಾರಿ ಯಂತ್ರಗಳಿಂದ ಬ್ಲಾಸ್ಟ್ ಮಾಡುತ್ತಿರುವ ಪರಿಣಾಮ ಜನರಿಗೆ ಕಿರಿಕಿರಿಯಾಗಿದೆ ಹಾಗೂ ಸುತ್ತಮುತ್ತಲಿನ ಬೆಳೆ ಹಾಳಾಗಿದೆ ಇದರಿಂದ ರೈತರಿಗೆ ಲಕ್ಷಾಂತರ ರೂ ನಷ್ಟವಾಗಿದೆ ಕಂಪನಿಯವರು ಪರಿಹಾರವೂ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜನರ ಆರೋಗ್ಯದ ಮೇಲೆ ಪರಿಣಾಮ :
ಸುವಿತ್ ಕಂಪನಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದರಿಂದ ನಿತ್ಯ ನೂರಾರು ಲಾರಿಗಳು ಟಿಪ್ಪರ್ಗಳು ಗ್ರಾಮದಲ್ಲಿ ಓಡಾಡುತ್ತಿವೆ. ಇದರಿಂದ ಗ್ರಾಮದೆಲ್ಲಡೆ ಧೂಳಿನ ವಾತಾವರಣ ಸೃಷ್ಟಿಯಾಗಿದೆ. ಜನರು ಅಸ್ತಮಾ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ದೂರಿದರು.
ಜನರ ಸಮಸ್ಯಗಳನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಂಡು ಸ್ಥಳಕ್ಕೆ ಭೇಟಿ ನೀಡಿ ಕಲ್ಲು ಗಣಿಗಾರಿಕೆ ನಿಲ್ಲಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.