ರಾಯಚೂರು | ಅನೀಮಿಯಾ ಕುರಿತು ಅರಿವು, ಪರೀಕ್ಷೆ, ಚಿಕಿತ್ಸಾ ಶಿಬಿರ
ರಾಯಚೂರು : ಪೌಷ್ಠಿಕಾಂಶಯುಕ್ತ ಆಹಾರ ಸೇವನೆಯಿಂದ ಅನೀಮಿಯಾ (ರಕ್ತಹೀನತೆ) ತಡೆಗಟ್ಟಬಹುದು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ತುಕರಾಂ ಪಾಂಡ್ವೆ ಅವರು ಹೇಳಿದರು.
ಫೆ.13ರ ಗುರುವಾರ ದಂದು ನಗರದ ಪೊಲೀಸ್ ಕಾಲೋನಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರ್.ಸಿ.ಹೆಚ್ ವಿಭಾಗ ರಾಯಚೂರು ಇವರ ಸಂಯುಕ್ತಾಶ್ರದಲ್ಲಿ ʼಅನೀಮಿಯಾ ಮುಕ್ತ ಪೌಷ್ಠಿಕ ಕರ್ನಾಟಕʼ ಅಂಗವಾಗಿ ʼಅನೀಮಿಯಾ ಕುರಿತು ಅರಿವು, ಪರೀಕ್ಷೆ ಹಾಗೂ ಚಿಕಿತ್ಸಾ ಶಿಬಿರʼಕ್ಕೆ ಚಾಲನೆ ನೀಡಿ ಮಾತನಾಡಿದರು.
ರಕ್ತದಲ್ಲಿ ಹಿಮೋಗ್ಲೊಬಿನ್ ಅಂಶ ಕಡಿಮೆಯಾದಾಗ ರಕ್ತಹೀನತೆ ಉಂಟಾಗುತ್ತದೆ. ಪ್ರತಿಯೊಬ್ಬರಲ್ಲೂ ಹಿಮೋಗ್ಲೊಬಿನ್ ಅಂಶ ಶೇ.12 ರಷ್ಟು ಇರಬೇಕು. ರಕ್ತಹೀನತೆಯಿಂದ ಮಕ್ಕಳಲ್ಲಿ ಏಕಾಗ್ರತೆ ಶಕ್ತಿ ಕಡಿಮೆ ಯಾಗುತ್ತದೆ. ಮಹಿಳೆಯರಲ್ಲಿ ಪದೇ ಪದೇ ಗರ್ಭಪಾತ ಉಂಟಾಗುತ್ತದೆ. ಗರ್ಭಿಣಿಯರು, ಬಾಣಂತಿಯರು ಹಾಗೂ ಹೆಣ್ಣುಮಕ್ಕಳಲ್ಲಿ ರಕ್ತಹೀನತೆ ಹೆಚ್ಚಾಗಿ ಕಂಡು ಬರುತ್ತದೆ. ಹೆಣ್ಣು ಮಕ್ಕಳಿಗೆ ಪೌಷ್ಠಿ ಕಾಂಶಯುಕ್ತ ಸಮರ್ಪಕ ಆಹಾರ, ಬಡತನ ಮುಂತಾದ ಕಾರಣಗಳಿಂದ ಅಪೌಷ್ಠಿಕತೆಯಿಂದ ರಕ್ತ ಹೀನತೆ ಉಂಟಾಗುತ್ತಿದೆ ಎಂದರು.
ಸೊಪ್ಪು,ತರಕಾರಿ, ಹಣ್ಣು,ಹಂಪಲು ಹೆಚ್ಚಾಗಿ ಸೇವಿಸುವುದರಿಂದ ರಕ್ತಹೀನತೆ ತಡೆಗಟ್ಟಬಹುದು. ಅನೀಮಿಯಾ ಮುಕ್ತ ಕರ್ನಾಟಕ ಎಂಬುದು ಸರ್ಕಾರದ ಉದ್ದೇಶ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 6 ತಿಂಗಳಿನಿಂದ 18 ವರ್ಷದೊಳಗಿನ ಎಲ್ಲಾ ಗಂಡು ಮತ್ತು ಹೆಣ್ಣು ಮಕ್ಕಳು, ಶಾಲೆಯಿಂದ ಹೊರಗುಳಿದ ಮಕ್ಕಳ ತಪಾಸಣೆ ಮಾಡಲಾಗುತ್ತದೆ. ಹಿಮೋಗ್ಲೊಬಿನ್ ಅಂಶ ಕಡಿಮೆ ಇರುವವರಿಗೆ ಕಬ್ಬಿಣಾಂಶದ ಮಾತ್ರೆ, ತೀವ್ರವಾಗಿ ಅನೀಮಿಯಾದಿಂದ ಬಳಲುತ್ತಿದ್ದರೆ ಕಬ್ಬಿಣಾಂಶದ ಚುಚ್ಚುಮದ್ದು ನೀಡಲಾಗುತ್ತದೆ. ಪ್ರತಿಯೊಬ್ಬರು ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು ಅವರು ಮಾತನಾಡಿ, ಆರೋಗ್ಯವೇ ಸಂಪತ್ತು. ಹೆಣ್ಣುಮಕ್ಕಳು ಸಮರ್ಪಕ ಆಹಾರ ಸೇವನೆ ಮಾಡದಿರುವುದರಿಂದ ಇವರಲ್ಲಿ ರಕ್ತಹೀನತೆ ಹೆಚ್ಚಾಗಿ ಕಂಡು ಬರುತ್ತಿದೆ. ಆಹಾರದಲ್ಲಿ ಮೊಳಕೆ ಕಾಳುಗಳು, ತರಕಾರಿ, ಸೊಪ್ಪು, ತುಪ್ಪ ಹೆಚ್ಚಾಗಿ ಸೇವಿಸಬೇಕು. ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುವುದರಿಂದ ವಿದ್ಯಾರ್ಥಿಗಳು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ವಿದ್ಯಾರ್ಥಿಗಳು ತಾವು ಆರೋಗ್ಯ ಅರಿವು ಹೊಂದಿ ಇತರರಿಗೂ ಅರಿವು ಮೂಡಿಸಬೇಕು ಎಂದರು.
ರಕ್ತಹೀನತೆಯ ಲಕ್ಷಣಗಳು :
ದೇಹದಲ್ಲಿ ರಕ್ತದ ಕೊರತೆಯಿಂದ ಕೂದಲು ಉದುರಲು ಪ್ರಾರಂಭಿಸುತ್ತದೆ. ಇದ್ದಕ್ಕಿದ್ದಂತೆ ವಿಪರೀತ ಕೂದಲು ಉದುರಿದರೆ ದೇಹದಲ್ಲಿ ರಕ್ತದ ಕೊರತೆಯಿದೆ ಎಂದು ಅರ್ಥಮಾಡಿಕೊಳ್ಳಿ. ಅಂತಹ ಪರಿಸ್ಥಿತಿಯಲ್ಲಿ, ಮೊದಲು ರಕ್ತ ಪರೀಕ್ಷೆಯನ್ನು ಮಾಡಿ. ರಕ್ತದ ಕೊರತೆಯಿಂದಾಗಿ, ಬಾಯಿಯಲ್ಲಿ ಹುಣ್ಣುಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಇದರಿಂದ ಆಹಾರ ಸೇವಿಸಲು ತೊಂದರೆಯಾಗುತ್ತಿದೆ. ಮೊಡವೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ರಕ್ತದ ಕೊರತೆಯಿಂದ ಮುಖದ ಮೇಲೆ ಹಳದಿ ಬಣ್ಣ ಕಾಣಿಸಿಕೊಳ್ಳುತ್ತದೆ, ನಿಮಗೂ ಹೀಗೆ ಅನಿಸಿದರೆ ಮೊದಲು ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ.ನಂದಿತಾ ಅವರು ಹೇಳಿದರು.
ಈ ಸಂದರ್ಭದಲ್ಲಿ ರಾಯಚೂರು ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಜ್ವಲ್, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ರಂಗಸ್ವಾಮಿ ಶೆಟ್ಟಿ, ಎಲ್.ಬಿ.ಎಸ್ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ.ಸುಷ್ಮಾ ಪಾಟೀಲ್, ಪೊಲೀಸ್ ಕಾಲೋನಿಯ ಸರ್ಕಾರಿ ಪ್ರೌಢ ಶಾಲೆಯ ಮುಖ್ಯಗುರುಗಳಾದ ಗೋವಿಂದಪ್ಪ, ಜಿಲ್ಲಾ ಆರೋಗ್ಯ ಮತ್ತು ಶಿಕ್ಷಣಾಧಿಕಾರಿ ಬಸಯ್ಯ, ಶಿವುಕುಮಾರ್, ಸಂಧ್ಯಾ ನಾಯಕ ಸೇರಿದಂತೆ ಆಶಾ ಕಾರ್ಯಕರ್ತಯರು ಇದ್ದರು.