ರಾಯಚೂರು | ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಶಾಲೆಗಳ ಸಮಸ್ಯೆಗಳ ಪರಿಹಾರಕ್ಕೆ ಮನವಿ
ರಾಯಚೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾನಾ ಆಝಾದ್ ಆಂಗ್ಲ ಮಾಧ್ಯಮ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ವಸತಿ ನಿಲಯಗಳ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ವಕ್ತಾರ ರಝಾಕ್ ಉಸ್ತಾದ್ ಅವರು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್ ಅವರಿಗೆ ಮನವಿ ಸಲ್ಲಿಸಿದರು.
ಅಲ್ಪಸಂಖ್ಯಾತ ಸಮುದಾಯದ ಶೈಕ್ಷಣಿಕ ಅಭಿವೃದ್ದಿಗಾಗಿ ಸ್ಥಾಪಿಸಲಾದ ಶಾಲೆಗಳು ಮತ್ತು ವಸತಿ ನಿಲಯಗಳಲ್ಲಿ ಹುದ್ದೆಗಳ ಕೊರತೆ, ಮೂಲಸೌಕರ್ಯಗಳ ಅಭಾವದಿಂದಾಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ವಿವರಿಸಲಾಯಿತು. ವಿಶೇಷವಾಗಿ, ಮೌಲಾನಾ ಆಝಾದ್ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಹಿಂದಿ ಶಿಕ್ಷಕರ ಹುದ್ದೆ, ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆ ಹಾಗೂ ಡಿ-ಗ್ರೂಪ್ ಸಿಬ್ಬಂದಿ ಮತ್ತು ಕ್ಲರ್ಕ್ ಹುದ್ದೆಗಳನ್ನು ಮಂಜೂರು ಮಾಡುವಂತೆ ಒತ್ತಾಯಿಸಲಾಯಿತು.
ರಾಯಚೂರಿನಲ್ಲಿ ಹೆಚ್ಚುವರಿ ಎರಡು ಮೌಲಾನಾ ಆಝಾದ್ ಆಂಗ್ಲ ಮಾಧ್ಯಮ ಶಾಲೆಗಳನ್ನು ಮಂಜೂರು ಮಾಡಬೇಕು. ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಸಿಬಿಎಸ್‍ಇ ವಸತಿ ಶಾಲೆಗೆ ಇನ್ನೂ 12 ಶಿಕ್ಷಕೇತರ ಹುದ್ದೆಗಳನ್ನು ಹೆಚ್ಚಿಸಬೇಕೆಂದು ಮನವಿ ಸಲ್ಲಿಸಲಾಯಿತು. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಪ್ರವೇಶ ಸಂಖ್ಯೆ ದ್ವಿಗುಣಗೊಂಡ ಹಿನ್ನೆಲೆಯಲ್ಲಿ ಶಿಕ್ಷಕೇತರ ಹುದ್ದೆಗಳನ್ನೂ ದ್ವಿಗುಣಗೊಳಿಸಬೇಕೆಂದು ಬೇಡಿಕೆ ವ್ಯಕ್ತವಾಯಿತು.
ರಾಯಚೂರು ನಗರದಲ್ಲಿ ಒಂದೇ ಕಟ್ಟಡದಲ್ಲಿ ನಡೆಯುತ್ತಿರುವ ಮೂರು ಬಾಲಕಿಯರ ವಸತಿ ನಿಲಯಗಳಿಗೆ ಪ್ರತ್ಯೇಕ ಕಟ್ಟಡಗಳನ್ನು ನಿರ್ಮಿಸಬೇಕು, ಜಿಲ್ಲೆಯ ಮಹಿಳೆಯರಿಗೆ ವಕಿರ್ಂಗ್ ವುಮೆನ್ ವಸತಿ ನಿಲಯವನ್ನು ಮಂಜೂರು ಮಾಡಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಯಿತು. ಖಾಸಗಿ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡುವ ವ್ಯವಸ್ಥೆ ಮಾಡಬೇಕು. ಶಾದಿ ಮಹಲ್ ನಿರ್ಮಾಣ ಯೋಜನೆಯನ್ನು ಖಾಸಗಿ ಸಂಘ ಸಂಸ್ಥೆಗಳಿಗೂ ವಿಸ್ತರಿಸಬೇಕು ಹಾಗೂ ಶಾದಿ ಭಾಗ್ಯ ಯೋಜನೆಯ ಸಹಾಯಧನವನ್ನು ಯಾವುದೇ ರೀತಿಯ ಮದುವೆಗೆ ಅನ್ವಯಿಸುವಂತೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಹಾರಿಸ್ ಸಿದ್ದೀಖಿ, ಇಕ್ಬಾಲ್ ಅಹ್ಮದ್, ಮುಹಮ್ಮದ್ ಉಸ್ಮಾನ್, ಸೈಯದ್ ಅಮೀನುಲ್ ಹಸನ್, ಸೈಯದ್ ಸುಲ್ತಾನ್, ಖಾಜಾ ಮೋಯಿನುದ್ದೀನ್ ಉಪಸ್ಥಿತರಿದ್ದರು.