ರಾಯಚೂರು | ಅವಧಿ ಪೂರ್ಣಗೊಂಡ ಸಿಂಧನೂರು, ದೇವದುರ್ಗ, ಲಿಂಗಸುಗೂರು ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿಗಳ ನೇಮಕ
ರಾಯಚೂರು: ಅವಧಿ ಪೂರ್ಣಗೊಂಡಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸಿ ನಗರಾಭಿವೃದ್ದಿ ಇಲಾಖೆ ಅಧೀನ ಕಾರ್ಯದರ್ಶಿ ಮಂಜುನಾಥ ಅಧಿಸೂಚನೆ ಪ್ರಕಟಿಸಿದ್ದಾರೆ.
ಜಿಲ್ಲೆಯ ಸಿಂಧನೂರು ನಗರಸಭೆ, ದೇವದುರ್ಗ, ಲಿಂಗಸೂಗೂರು ಪುರಸಭೆ ಸೇರಿ ರಾಜ್ಯದ 42 ನಗರಸಭೆಗಳು, 53 ಪುರಸಭೆಗಳು 23 ಪಟ್ಟಣ ಪಂಚಾಯತ್‌ಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸಲಾಗಿದೆ.
ಸಿಂಧನೂರು ನಗರಸಭೆ ಆಡಳಿತಾವಧಿ ಅ.24 ರಂದು ಪೂರ್ಣಗೊಂಡಿದ್ದು, ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿಗಳನ್ನು ನಿಯುಕ್ತಿ ಮಾಡಲಾಗಿದೆ. ದೇವದುರ್ಗ ಪುರಸಭೆ ಆಡಳಿತ ಅವಧಿ ಅ.18 ರಂದು ಪೂರ್ಣಗೊಂಡಿದ್ದು, ಸಹಾಯಕ ಆಯುಕ್ತರನ್ನು ಲಿಂಗಸೂಗೂರು ಪುರಸಭೆ ಅವಧಿ ಅ.30 ರಂದು ಮುಕ್ತಾಯವಾಗಿದ್ದ ಆಡಳಿತಾಧಿಕಾರಿ ಲಿಂಗಸೂಗೂರು ಸಹಾಯಕ ಆಯುಕ್ತರಿಗೆ ನೇಮಿಸಿ ಆದೇಶಿಸಲಾಗಿದೆ.
ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ಮೀಸಲಾತಿ ಕುರಿತಂತೆ ಅರ್ಜಿಗಳ ವಿಚಾರಣೆ ಬಾಕಿಯಿದ್ದು, ಅಲ್ಲಿಯವರಗೆ ಕಚೇರಿ ಕಾರ್ಯಚಟುವಟಿಕೆಗಳಿಗೆ ತೊಂದರೆಯಾಗದಂತೆ ಆಡಳಿತಾಧಿಕಾರಿಯನ್ನು ನೇಮಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.
ಅವಧಿ ಪೂರ್ಣಗೊಂಡಿರುವ ದಿನಾಂಕದ ಅನ್ವಯ ಮೊದಲ ಹಂತ ಆಡಳಿತಾಧಿಕಾರಿ ನೇಮಕ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಮಹಾನಗರ ಪಾಲಿಕೆಗಳು ಸೇರಿದಂತೆ ಇನ್ನುಳಿದ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯ್ತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮೀಸಲಾತಿ ಕುರಿತಂತೆ ವಿವಿಧ ಹೈಕೋರ್ಟ್‌ಗಳಲ್ಲಿ ಪ್ರತ್ಯೇಕವಾದ ಆಕ್ಷೇಪಣಾ ಅರ್ಜಿಗಳು ಸಲ್ಲಿಕೆಯಾಗಿದೆ. ವಿಚಾರಣಾ ಹಂತದಲ್ಲಿ ಪ್ರಕರಣಗಳಿರುವುದರಿಂದ ಬಾಕಿಯಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರ ನೇಮಕ ನಡೆದಿಲ್ಲ.
ಆಡಳಿತಾಧಿಕಾರಿಗಳನ್ನು ನೇಮಿಸಿದಂತೆ ಇತ್ತೀಚಿಗೆ ಹೈಕೋರ್ಟ ಪ್ರಕರಣವೊಂದರಲ್ಲಿ ಸೂಚನೆ ನೀಡಿತ್ತು. ಆದರೀಗ ಸುಪ್ರಿಂಕೋರ್ಟ್ ತೀರ್ಪುನ ಮೇರೆಗೆ ನಗರ ಸ್ಥಳೀಯ ಸಂಸ್ಥೆಗಳ ಆಡಳಿತಾಧಿಕಾರಿ ನೇಮಕಕ್ಕೆ ಸರ್ಕಾರ ಅಧಿಸೂಚನೆ ಪ್ರಕಟಿಸಿದೆ.