×
Ad

ರಾಯಚೂರು | ವಿಚಾರಣೆಗೆ ಕರೆತರಲು ಹೋದ ಎಎಸ್ಐ, ಪಿಎಸ್ಐ ಮೇಲೆ ಹಲ್ಲೆ : ಆರೋಪ

Update: 2025-11-12 08:53 IST

ರಾಯಚೂರು: ಲಿಂಗಸುಗೂರು ತಾಲೂಕಿನ ಮುದಗಲ್ ಸಮೀಪದ ಮಟ್ಟೂರು ತಾಂಡಾದಲ್ಲಿ ಪ್ರಕರಣ ಒಂದರ ವಿಚಾರಣೆಗೆ ಆರೋಪಿಗಳನ್ನು ಕರೆ ಕರೆತರಲು ಹೋದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ.

ಮುದಗಲ್ ಠಾಣೆಯ ಎಎಸ್‌ಐ ವೆಂಕಟಪ್ಪ ನಾಯಕ್ ಹಾಗೂ ಪಿಎಸ್‌ಐ ವೆಂಕಟೇಶ ಮಾಡಗೇರಿ ಅವರ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಮುದಗಲ್ ಠಾಣೆಯಲ್ಲಿ ಇತ್ತೀಚೆಗೆ ದಾಖಲಾಗಿದ್ದ ಹಲ್ಲೆ ಪ್ರಕರಣದ ವಿಚಾರಣೆಗಾಗಿ ಮುದಗಲ್ ಠಾಣೆಯ ಎಎಸ್‌ಐ ವೆಂಕಟಪ್ಪ ನಾಯಕ್ ಹಾಗೂ ಹೆಡ್ ಕಾನ್‌ಸ್ಟೇಬಲ್ ರಾಮಪ್ಪ ಅವರು ಮಟ್ಟೂರು ತಾಂಡಾಕ್ಕೆ ತೆರಳಿದ್ದರು. ಆರೋಪಿಗಳಾದ ರಾಮಪ್ಪ ಕೃಷ್ಣ (35) ಹಾಗೂ ಸಕ್ಕುಬಾಯಿ ರಾಮಪ್ಪ (30) ವಿಚಾರಣೆ ವೇಳೆ ಏಕಾಏಕಿ ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಕಲ್ಲು ಹಾಗೂ ದೊಣ್ಣೆಯಿಂದ ಹಲ್ಲೆ ಮಾಡಿದ್ದರಿಂದ ಅಧಿಕಾರಿಗಳು ಗಾಯಗೊಂಡಿದ್ದಾರೆ.

ಹಲ್ಲೆ ವೇಳೆ ಎಎಸ್‌ಐ ಅವರ ಸಮವಸ್ತ್ರ ಹರಿದು ಹೋಗಿದ್ದು, ಮೊಬೈಲ್ ಫೋನ್ ಹಾನಿಗೊಂಡಿದೆ. ನಂತರ ಸ್ಥಳಕ್ಕೆ ದೌಡಾಯಿಸಿದ ಪಿಎಸ್‌ಐ ವೆಂಕಟೇಶ ಮಾಡಗೇರಿಯವರ ಮೇಲೂ ಆರೋಪಿಗಳು ಹಲ್ಲೆ ನಡೆಸಿ, ಅವರಿಗೂ ಗಾಯಪಡಿಸಿದ್ದಾರೆ. ಇಬ್ಬರನ್ನೂ ಚಿಕಿತ್ಸೆಗಾಗಿ ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಎಸ್ ಪಿ ಪುಟ್ಟಮಾದಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಮುದಗಲ್ ಠಾಣೆ ಪಿ.ಎಸ್.ಐ ವೆಂಕಟೇಶ ಹಾಗೂ ಎ.ಎಸ್.ಐ ವೆಂಕಟಪ್ಪ ನಾಯಕ ಅವರು ಕರ್ತವ್ಯಕ್ಕೆ ತೆರಳಿದ್ದ ಸಂದರ್ಭದಲ್ಲಿ ಮಟ್ಟೂರು ತಾಂಡಾದಲ್ಲಿ ಹಲ್ಲೆ ನಡೆಸಿರುವ ಬಗ್ಗೆ ಮಾಹಿತಿ ಪಡೆಯಲಾಗಿದ್ದು, ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ಮಾಡಿದವರ ಮೇಲೆ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News