ರಾಯಚೂರು | ಬಿಜೆಪಿಯ ಯುವ ಮುಖಂಡ ಸನ್ನಿ ಗಡಿಪಾರಿಗೆ ಭೀಮ್ ಆರ್ಮಿ ಖಂಡನೆ
ರಾಯಚೂರು: ರಾಯಚೂರು ಉಪ ವಿಭಾಗಾಧಿಕಾರಿ ಗಜಾನನ ಬಾಳೆ ಅವರು ಬಿಜೆಪಿ ಮುಖಂಡ ಸನ್ನಿ ರೊನಾಲ್ಡೊ ಅವರನ್ನು ಈಚೆಗೆ ಗಡಿಪಾರು ಮಾಡಿರುವುದು ಖಂಡನೀಯ ಎಂದು ಭೀಮ್ ಆರ್ಮಿ ಅಧ್ಯಕ್ಷ ವಿಶ್ವನಾಥ ಬಲ್ಲಿದವ್ ಹೇಳಿದರು.
ಅವರಿಂದು ಗಡಿಪಾರು ಮಾಡಿ ಆದೇಶ ಮಾಡುವುದು ಸಾಮಾನ್ಯ ಪ್ರಕ್ರಿಯೆಯಲ್ಲ ಎಂದು ಸುಪ್ರೀಂಕೋರ್ಟ್ ಹಲವು ಪ್ರಕರಣಗಳಲ್ಲಿ ಈಗಾಗಲೇ ಉಲ್ಲೇಖಿಸಿದೆ. ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಮಿತವಾಗಿ ಜಾರಿ ಮಾಡಬಹುದಾಗಿದೆ. ಅಲ್ಲದೇ, ಗಡಿಪಾರು ಮಾಡುವುದು ಸಂವಿಧಾನದ 19 (1) (ಡಿ) ಪ್ರಕಾರ ಮೂಲಭೂತ ಹಕ್ಕನ್ನು ಕಸಿದುಕೊಳ್ಳುವಂತಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.
ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 58ರಡಿ ಯಾವ ವ್ಯಕ್ತಿಯ ವಿರುದ್ಧ ಗಡಿಪಾರು ಆದೇಶಗಳನ್ನು ಹೊರಡಿಸಲಾಗಿರುತ್ತದೆಯೋ ಅಂತಹ ವ್ಯಕ್ತಿಗೆ ಸಾಕಷ್ಟು ಅವಕಾಶಗಳನ್ನು ನೀಡಬೇಕಾಗುತ್ತದೆ. ಆ ವ್ಯಕ್ತಿಗೆ ಆದೇಶ ಹೊರಡಿಸಲಾಗುತ್ತದೆ ಎಂಬುದನ್ನು ತಿಳಿಸಬೇಕು. ಆ ನಂತರ ಆ ವ್ಯಕ್ತಿಯ ಅಹವಾಲು ಆಲಿಸಬೇಕು ಎಂದು ನಿಯಮವಿದ್ದರೂ ಅದೆಲ್ಲವನ್ನು ಬದಿಗಿಟ್ಟು ಅಧಿಕಾರಿಗಳು ಹೆಚ್ಚಿನ ಕಾಲವಕಾಶವನ್ನು ನೀಡದೆ ರಾಜಕೀಯ ಒತ್ತಡಕ್ಕೆ ಮಣಿದು ಗಡಿಪಾರು ಮಾಡಿದ್ದಾರೆ ಎಂದು ಆರೋಪ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ರಾಮು, ಕರ್ಣ ಮಲದಕಲ್, ಮೋಹನ್ ಬಲ್ಲಿದವ್, ದೀಪಕ ಭಂಡಾರಿ ಉಪಸ್ಥಿತರಿರುವರು.