ರಾಯಚೂರಿನಲ್ಲಿ ಡಿ.20, 21ರಂದು ದಲಿತ ಸಾಹಿತ್ಯ ಸಮ್ಮೇಳನ : ಅಮರೇಶ ವೆಂಕಟಾಪುರ
ಲಿಂಗಸುಗೂರು: ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ವತಿಯಿಂದ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಡಿ.20 ಹಾಗೂ 21 ರಂದು ರಾಯಚೂರು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಏರ್ಪಡಿಸಲಾಗಿದೆ ಎಂದು ಲಿಂಗಸುಗೂರು ದಲಿತ ಸಾಹಿತ್ಯ ಪರಿಷತ್ತು ಅಧ್ಯಕ್ಷ ಅಮರೇಶ ವೆಂಕಟಾಪುರ ತಿಳಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಯದೇವಿ ಗಾಯಕವಾಡ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ . ಸಾಹಿತಿ ಪ್ರೊ .ಬರಗೂರು ರಾಮಚಂದ್ರಪ್ಪ ಉದ್ಘಾಟಿಸಲಿದ್ದಾರೆ ಎಂದು ಅವರು ತಿಳಿಸಿದರು.
ಸಮ್ಮೇಳನದಲ್ಲಿ 'ಸರ್ವರಿಗೂ ಸಂವಿಧಾನʼ ಮತ್ತು 'ಮೀಸಲಾತಿ ಒಳಗೆ ಮತ್ತು ಹೊರಗೆʼ ಕುರಿತು ಎರಡು ಸಂವಾದ ಗೋಷ್ಠಿಯನ್ನು ಆಯೋಜಿಸಲಾಗಿದೆ. ಸಂವಿಧಾನ ಕುರಿತು ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ ಹಾಗೂ 'ಮೀಸಲಾತಿ ಒಳಗೆ ಮತ್ತು ಹೊರಗೆ' ಕುರಿತು ಸಾಹಿತಿ ಗುರುಪ್ರಸಾದ ಕಂಟಲಗೆರೆ ವಿಷಯ ಮಂಡಿಸಲಿದ್ದಾರೆ ಎಂದು ಹೇಳಿದರು.
ಸಮ್ಮೇಳನಾಧ್ಯಕ್ಷರ ಸಾಹಿತ್ಯದ ಕುರಿತು ವಿಚಾರ ಗೋಷ್ಠಿ, ಮಹಿಳಾ ಕಾವ್ಯಾಯಾನ, ಪುರುಷ ಕಾವ್ಯಾಯಾನ, ಸಾಂಸ್ಕೃತಿಕ ಕಾರ್ಯಕ್ರಮಗಳು, ರಾಷ್ಟ್ರೀಯ ಗೌರವ ಪ್ರಶಸ್ತಿ, ರಾಷ್ಟ್ರೀಯ ಯುವ ಪ್ರಶಸ್ತಿ, ರಾಷ್ಟ್ರೀಯ ಪುಸ್ತಕ ಪ್ರಶಸ್ತಿ, ಬಾಲ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಡಾ.ಎಲ್.ಹನುಮಂತಪ್ಪ ಆಶಯ ಭಾಷಣ ಮಾಡಲಿದ್ದಾರೆ. ಕಸಾಪ ನಿಕಟಪೂರ್ವ ಅಧ್ಯಕ್ಷ ಮನೂ ಬಳಿಗಾರ, ಪ್ರೊ.ಎಚ್.ಟಿ.ಪೋತೆ, ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು, ಅಧಿಕಾರಿಗಳು ಸಾಹಿತಿಗಳು, ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಡಿ.20 ರಂದು ಬೆಳಿಗ್ಗೆ 8 ಗಂಟೆಗೆ ಬಸವೇಶ್ವರ ವೃತ್ತದಿಂದ ಜಿಲ್ಲಾ ರಂಗ ಮಂದಿರದವರೆಗೆ ಜಾನಪದ ಕಲಾ ತಂಡಗಳ ಮೆರವಣಿಗೆ ನಡೆಯಲಿದೆ. ಮೇಯ ನರಸಮ್ಮ ಮಾಡಗಿರಿ ಮೆರವಣಿಗೆ ಚಾಲನೆ ನೀಡುವರು. ಬೆಳಿಗ್ಗೆ 10.30ಕ್ಕೆ ರಂಗ ಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಆರಂಭವಾಗಲಿದೆ ಎಂದು ಹೇಳಿದರು.
ಸಮ್ಮೇಳನದಲ್ಲಿ ಒಟ್ಟು ಆರು ಗೋಷ್ಠಿಗಳು ನಡೆಯಲಿವೆ. ಡಿ.21 ರಂದು ಸಂಜೆ 4 ಗಂಟೆಗೆ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ ಸಮಾರೋಪ ಭಾಷಣ ಮಾಡುವರು. ಬೀದರ್ ಬೌದ್ಧ ವಿಹಾರದ ವರಜ್ಯೋತಿ ಭಂತೇಜಿ ನೇತೃತ್ವ ವಹಿಸುವರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾಂತಗೌಡ ಪಾಟೀಲ್, ಪರಮಾನಂದ, ಶಿವರಾಜ ಕೆಂಭಾವಿ ಸೇರಿ ಇತರರು ಇದ್ದರು.