ರಾಯಚೂರು | ನಗರದ ಐತಿಹಾಸಿಕ ಕೋಟೆ, ನವರಂಗ ದರ್ವಾಜಕ್ಕೆ ಪ್ರಾಚ್ಯ ವಸ್ತು ಇಲಾಖೆಯ ಆಯುಕ್ತರ ಭೇಟಿ
ರಾಯಚೂರು : ಇಲ್ಲಿನ ಐತಿಹಾಸಿಕ ಕೋಟೆ ಸ್ಥಳಗಳನ್ನು ಪ್ರಾಚ್ಯವಸ್ತು ಇಲಾಖೆ ಆಯುಕ್ತ ದೇವರಾಜ ಹಾಗೂ ಮಹಾನಗರಪಾಲಿಕೆ ಆಯುಕ್ತ ಜೋಬಿನ್ ಮಹೋಪಾತ್ರ ಇಂದು ವೀಕ್ಷಣೆ ಮಾಡಿ ಪರಿಶೀಲನೆ ನಡೆಸಿದರು.
ಪಾಲಿಕೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಾಚ್ಯವಸ್ತು ಇಲಾಖೆ ಆಯುಕ್ತರು ಸಭೆ ನಡೆಸಿ, ಪ್ರಾಚ್ಯವಸ್ತು ಇಲಾಖೆ ನಿಯಮಗಳಂತೆ ನಗರದಲ್ಲಿ ವಿಸ್ತರಿಸಿಕೊಂಡಿರುವ ಕೋಟೆ ಹಾಗೂ ಒತ್ತುವರಿ ಕುರಿತು ಮಾಹಿತಿ ಪಡೆದರು. ನಂತರ ಮೆಕ್ಕದರವಾಜ್, ನವರಂಗ ದರವಾಜಸೇರಿದಂತೆ ವಿವಿಧ ಕೋಟೆ ಸ್ಥಳವೀಕ್ಷಣೆ ನಡೆಸಿದರು.
ನಗರ ಅನೇಕ ಕಡೆಗಳಲ್ಲಿ ಕೋಟೆ ಕಂದಕ ಒತ್ತುವರಿ ಮಾಡಿಕೊಂಡು ನಿರ್ಮಾಣಗೊಂಡಿರುವ ಕಟ್ಟಡಗಳು, ಜನವಸತಿ ಪ್ರದೇಶಗಳನ್ನು ವೀಕ್ಷಿಸಿದರು. ಅನಧಿಕೃತವಾಗಿ ವಾಸ ಮಾಡಲು ಅವಕಾಶ ಇಲ್ಲದೇ ಇದ್ದರೂ ಹೊಸ ಕಟ್ಟಡಗಳ ನಿರ್ಮಾಣವಾಗಿರುವದನ್ನು ಆಯುಕ್ತರು ಗಮನಿಸಿದರು.
ಪ್ರಾಚ್ಯ ವಸ್ತು ಇಲಾಖೆಯಿಂದ ಈಗಾಗಲೇ ಗುರುತಿಸಿರುವ ಸ್ಥಳಗಳ ಅಭಿವೃದ್ದಿಗೆ ಬೇಕಿರುವ ಕ್ರಮಗಳ ಕುರಿತು ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಿದರು. ಈಗಾಗಲೇ ಸಲ್ಲಿಕೆಯಾಗಿರುವ ದೂರುಗಳ ಅನ್ವಯ ತೆರವುಗೊಳಿಸಲು ಆಗಿರುವ ಕ್ರಮಗಳ ಕುರಿತು ಪರಾಮರ್ಶೆ ನಡೆಸಲಾಯಿತು. ಐತಿಹಾಸಿಕ ಕೋಟೆ ಸ್ಥಳ ರಕ್ಷಣೆ ಹಾಗೂ ಪುನರ್ ನಿರ್ಮಾಣದ ಕಾಮಗಾರಿ ಪ್ರಗತಿ ಮಾಹಿತಿಯನ್ನು ಸಂಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಪಾಲಿಕೆ ಹಾಗೂ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳಿದ್ದರು.