ರಾಯಚೂರು | ಲಿಂಗಸುಗೂರಿನಲ್ಲಿ ಕಾಂಗ್ರೆಸ್‌ನಿಂದ ʼಓಟ್ ಚೋರ್ ಗದ್ದಿ ಛೋಡ್ ಅಭಿಯಾನ
ರಾಯಚೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ಹಿಂದುಳಿದ ವರ್ಗ, ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಕಾಂಗ್ರೆಸ್ ಸಮಿತಿ ಲಿಂಗಸುಗೂರು ಘಟಕದ ವತಿಯಿಂದ ಇಂದು ಲಿಂಗಸುಗೂರು ಬಸ್ ನಿಲ್ದಾಣದ ಮುಂದೆ “ಓಟ್ ಚೋರ್ ಗದ್ದಿ ಛೋಡ್” (ಮತಗಳ್ಳರೆ ಕುರ್ಚಿ ಖಾಲಿ ಮಾಡಿ) ಅಭಿಯಾನದ ಅಂಗವಾಗಿ ಸಹಿ ಸಂಗ್ರಹ ಹಾಗೂ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಕೇಂದ್ರದ ಬಿಜೆಪಿ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ರಾಜ್ಯ ಮಾಧ್ಯಮ ವಕ್ತಾರ ಹಾಗೂ ಜಿಲ್ಲಾ ಉಸ್ತುವಾರಿ ಡಾ.ರಝಾಕ್ ಉಸ್ತಾದ್ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಯಚೂರು ನಗರ ಕ್ಷೇತ್ರದ 42 ಸಾವಿರ ಮತದಾರರ ಹೆಸರು ತೆಗೆದು ಹಾಕಲಾಗಿತ್ತು. ನಮ್ಮ ಹೋರಾಟದ ನಂತರ ಭಾಗಶಃ ಹೆಸರುಗಳನ್ನು ಸೇರಿಸಿದರೂ ಅನೇಕ ಮತದಾರರು ಪಟ್ಟಿಯಿಂದ ಹೊರಬಿದ್ದಿದ್ದಾರೆ. ಇದರ ಪರಿಣಾಮವಾಗಿ ರಾಯಚೂರು ಹಾಗೂ ಲಿಂಗಸುಗೂರಿನ ಕಾಂಗ್ರೆಸ್ ಅಭ್ಯರ್ಥಿಗಳು ಅಲ್ಪ ಅಂತರದಲ್ಲಿ ಸೋತಿದ್ದಾರೆ. ಬಿಜೆಪಿ ಪಕ್ಷದ ನಾಯಕರು ಇವಿಎಂ ಹ್ಯಾಕಿಂಗ್, ನಕಲಿ ಮತ ಚಲಾವಣೆ ಸೇರಿದಂತೆ ಹಲವು ಅನೈತಿಕ ಮಾರ್ಗಗಳಿಂದ ಅಧಿಕಾರಕ್ಕೆ ಬಂದಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಪಾಮಯ್ಯ ಮುರಾರಿ ಮಾತನಾಡಿ, ಬಿಜೆಪಿ ನಾಯಕರು ಚುನಾವಣಾ ಆಯೋಗವನ್ನು ದುರುಪಯೋಗ ಪಡಿಸಿಕೊಂಡು ಮತ ಕಳ್ಳತನ ಮಾಡಿದ್ದಾರೆ. ಕಾಂಗ್ರೆಸ್ ಮತಗಳನ್ನು ಅಳಿಸಿ ಪ್ರಜಾಪ್ರಭುತ್ವವನ್ನು ಅವಮಾನ ಮಾಡಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸಿ ಬರುವ ದಿನಗಳಲ್ಲಿ ಒಂದು ಮತವೂ ದುರುಪಯೋಗವಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಈ ವೇಳೆ ತಾಲ್ಲೂಕು ಮುಖಂಡ ಭೂಪನಗೌಡ, ಚನ್ನರೆಡ್ಡಿ, ನೀಲಮ್ಮ, ರವಿ ತಡಕಲ್, ರಾಮಣ್ಣ, ಲಕ್ಷ್ಮೀ, ಸೈಯದ್ ಹಯ್ಯೂಮ್ ಪಾಷಾ, ಜಿಲಾನಿ ಖುರೇಶಿ ಸೇರಿದಂತೆ ಇನ್ನಿತರರು ಇದ್ದರು.