ರಾಯಚೂರು | ಸೋಲಾರ್ ಕಂಬಗಳ ಸ್ಥಾಪನೆಯಿಂದ ಜಮೀನುಗಳಿಗೆ ಹಾನಿ: ರೈತರಿಂದ ಪರಿಹಾರಕ್ಕೆ ಆಗ್ರಹ
ರಾಯಚೂರು: ಸೋಲಾರ್ ಯೋಜನೆಯಡಿಯಲ್ಲಿ ರೈತರ ಖಾಸಗಿ ಜಮೀನಿನಲ್ಲಿ ಕಂಬಗಳು ಹಾಕಿದ್ದು, ರೈತರು ತಮ್ಮ ಜಮೀನಿಗೆ ಕಡಿಮೆ ಮೊತ್ತದ ಪರಿಹಾರ ನಿಗದಿಯಾಗಿರುವುದನ್ನು ವಿರೋಧಿಸಿ, ರೈತರು ಪಟ್ಟು ಹಿಡಿದಾಗ ರೈತರು ಹಾಗೂ ಪೊಲೀಸರ ಮಧ್ಯೆ ಕೆಲಕಾಲ ವಾಗ್ವಾದ ನಡೆದು ರೈತರನ್ನು ಬಂಧಿಸಿದ ಘಟನೆ ಸಿಂಧನೂರು ತಾಲ್ಲೂಕು ಜವಳಗೇರಾ ವ್ಯಾಪ್ತಿಯ ಸುಲ್ತಾನಪುರದಲ್ಲಿ ನಡೆದಿದೆ.
ಸೋಲಾರ್ ಕಂಬಗಳನ್ನು ಒಂದೊಂದಾಗಿ ಜೋಡಿಸುವ ಸಂದರ್ಭದಲ್ಲಿ ರೈತರ ಖಾಸಗಿ ಜಮೀನುಗಳಲ್ಲಿ ರಸ್ತೆ ನಿರ್ಮಾಣವಾಗುತ್ತಿದ್ದು, ಇದರಿಂದ ಜಮೀನಿಗೆ ಬಹಳಷ್ಟು ಹಾನಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಕೃಷಿಕರು ಪ್ರತಿ ಚದರ ಅಡಿ ಗೆ 2,500 ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಈ ಕುರಿತು ರೈತ ಮುಖಂಡ ಬಸವರಾಜ ಗೋಡಿಹಾಳ ಮಾತನಾಡಿ, ಹಾಳೂರು ಸೋಲಾರ ಪವರ್ ಪ್ರೈವೇಟ್ ಕಂಪನಿಯವರು ರೈತರ ಖಾಸಗಿ ಜಮೀನಿನಲ್ಲಿ ಕಂಬಗಳನ್ನು ಅಳವಡಿಸಿದ್ದು, ಕಂಬದಿಂದ ಕಂಬಕ್ಕೆ ಹೋಗುವ ಲೈನ್ ಕೆಳಗಡೆ ಬರುವ ರೈತರ ಜಮೀನಿಗೆ ಯಾವುದೇ ರೀತಿ ಪರಿಹಾರ ನೀಡದೆ, ಲೈನ್ ಎಳೆದುಕೊಂಡು ಹೋಗಿದ್ದಾರೆ. ರೈತರು ಆ ಲೈನ್ ಕೆಳಗಡೆ ಮನೆ ಕಟ್ಟಲಾಗಲಿ, ಮರ ಬೆಳೆಸುವುದಾಗಲಿ ಇನ್ನಿತರ ವೈಯಕ್ತಿಕ ಚಟುವಟಿಕೆ ಮಾಡಲು ಆಗದ ಕಾರಣ ರೈತರು ತಮ್ಮ ಜಮೀನಿಗೆ ನಿಷ್ಠುರವಾಗಿ ಕಡಿಮೆ ಮೊತ್ತದ ಪರಿಹಾರ ನಿಗದಿಯಾಗಿರುವುದನ್ನು ವಿರೋಧಿಸಿದ್ದಾರೆ ಎಂದರು.
ಅಧಿಕಾರಿಗಳು ಈ ಕುರಿತು ಗಮನ ಹರಿಸಬೇಕು ಮತ್ತು ರೈತರ ಬದುಕು ಹಾಳಾಗದಂತೆ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
ನಂತರ ಬಂಧಿಸಿದ ರೈತರನ್ನು ಪೊಲೀಸರು ಬಿಡುಗಡೆಗೊಳಿಸಿದರು.