×
Ad

ರಾಯಚೂರು: ಮಾದಕ ವಸ್ತುಗಳ ಮಾರಾಟ ನಿರ್ಮೂಲನೆಗೆ ಸಮನ್ವಯತೆಯಿಂದ ಕೆಲಸ ಮಾಡಲು ಜಿಲ್ಲಾಧಿಕಾರಿ ಸೂಚನೆ

Update: 2025-06-13 20:40 IST

ರಾಯಚೂರು: ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸಿ.ಎಚ್ ಮತ್ತು ಅಲ್ಫಾಜೋಲಮ್ ರಾಸಾಯನಿಕ ಮಿಶ್ರಿತ ಸೇಂದಿ ತಯಾರಿಸುವ, ಮಾರಾಟ ಮಾಡುವ ದಂಧೆ, ಗಾ೦ಜಾ ಹಾಗೂ ಇತರೆ ಮಾದಕ ವಸ್ತುಗಳ ಮಾರಾಟದ ಕುರಿತು ಮಾಹಿತಿ ಪಡೆದು ಅಕ್ರಮಗಳಿಗೆ ಕಡಿವಾಣ ಹಾಕಲು ವಿವಿಧ ಇಲಾಖೆಯ ಅಧಿಕಾರಿಗಳು ಒಗ್ಗಟ್ಟು ಹಾಗೂ ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ನಿತಿಶ್ ಕೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ವಿವಿಧ ಇಲಾಖೆಗಳನ್ನು ಒಳಗೊಂಡ ಸ್ಥಾಯಿ ಸಮಿತಿಯ ಸಭೆ ನಡೆಸಿ ಮಾತನಾಡಿದ ಅವರು ಕಲಬೆರಕೆ ಸೇಂದಿ ದಂಧೆಯ ನಿರ್ಮೂಲನೆಗೆ ಪೋಲಿಸ್ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳು ಬೇರೆ ಇಲಾಖೆಗಳ ಸಹಕಾರದೊಂದಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಸೇಂದಿ ದಂಧೆಯಲ್ಲಿ ತೊಡಗಿರುವ ಆರೋಪಿಗಳನ್ನು ಗಡಿಪಾರು ಮಾಡಲು ಪ್ರಸ್ಥಾವನೆಯನ್ನು ಸಲ್ಲಿಸುವಂತೆ ಸೂಚಿಸಿದರು.

ರಾಯಚೂರು ನಗರದ ಮೈಲಾರ ನಗರ, ಹರಿಜನವಾಡ, ಮಡ್ಡಿಪೇಟೆ, ತಿಮ್ಮಪುರಪೇಟೆ, ಮಂಗಳವಾರ ಪೇಟೆ ಮತ್ತು ರಾಗಿಮಾನಗಡ್ಡ ಮುಂತಾದ ಬಡಾವಣೆಗಳಲ್ಲಿ ಸೇಂದಿ ಚಟಕ್ಕೆ ಈಡಾಗಿರುವ ಜನರ ಸಂಖ್ಯೆ ಹೆಚ್ಚಾಗಿರುವುದರಿಂದ, ಸೇ೦ಧಿಯ ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಾಗೂ ಆರೋಗ್ಯತಪಾಸಣಾ ಶಿಬಿರಗಳನ್ನು ಆಯೋಜಿಸುವ೦ತೆ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಡಿಅಡಿಕ್ಷನ್‌ ಕೇಂದ್ರ ಸ್ಥಾಪಿಸುವ ಸಂಬಂಧ ಕ್ರಮಕೈಗೊಳ್ಳುವ೦ತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಹಾಜರಿದ್ದ ರೈಲ್ವೆ ಮತ್ತು ಆರ್.ಪಿ.ಎಫ್ ಅಧಿಕಾರಿಗಳಿಗೆ, ತೆಲಂಗಾಣದ ಕೃಷ್ಣದಿಂದ ರಾಯಚೂರು ನಗರಕ್ಕೆ ಸೇ೦ಧಿಯನ್ನು ಸಾಗಿಸಲು ದಂಧೆಕೊರರು ರೈಲ್ವೆ ಸೌಕರ್ಯಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಸೇ೦ಧಿಯನ್ನು ಸಾಗಿಸಲು ದಂಧೆಕೋರರು ಅಪ್ರಾಪ್ತ ಮಕ್ಕಳನ್ನು ತೊಡಗಿಸಿಕೊಳ್ಳುವುದನ್ನು ತಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಲಿಂಗಸುಗೂರು ಮತ್ತು ದೇವದುರ್ಗ ತಾಲ್ಲೂಕಿನಲ್ಲಿ ಚಾಲನೆಯಲ್ಲಿರುವ ಕಳ್ಳ ಭಟ್ಟಿ ಸಾರಾಯಿ ಕೇಂದ್ರಗಳ ನಿರ್ಮೂಲನೆ ಮಾಡುವುದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್, ಅಬಕಾರಿ ಮತ್ತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ  ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ಸಿ.ಎಚ್, ಅಲ್ಫಾಜೊಲಮ್, ಕಲಬೆರಕೆ ಸೇ೦ಧಿ, ಕಳ್ಳ ಭಟ್ಟಿ ಸಾರಾಯಿ ಮತ್ತು ಗಾ೦ಜಾ ಕುರಿತ ಅಪರಾಧಗಳನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಲು ತಾಲೂಕು ಮಟ್ಟದಲ್ಲಿ ತಹಸೀಲ್ದಾರ  ನೇತೃತ್ವದಲ್ಲಿ ಸ್ಥಾಯಿ ಸಮಿತಿ ಸಭೆಗಳನ್ನು ನಡೆಸಿ ವರದಿ ಸಲ್ಲಿಸುವಂತೆಯೂ ಹಾಗೂ ಪ್ರತಿ ಮಾಹೆ ಜಿಲ್ಲಾಮಟ್ಟದ ಸ್ಥಾಯಿ ಸಮಿತಿ ಸಭೆ ಆಯೋಜನೆಗೆ ಕ್ರಮ ವಹಿಸುವಂತೆ ಮಾನ್ಯ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ಸಭೆಯಲ್ಲಿ ಪೊಲೀಸ್ ವರಿಷ್ಟಾಧಿಕಾರಿ ಎಂ ಪುಟ್ಟ ಮಾದಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುರೇಂದ್ರ ಬಾಬು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರ್.ಪಿ.ಎಪ್, ರೈಲ್ವೆ, ಅರಣ್ಯ ಮತ್ತು ಇತರ ಇಲಾಖೆಗಳ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News