ರಾಯಚೂರು | ಜಿಲ್ಲಾ ತಂಬಾಕು ನಿಯಂತ್ರಣ ಸಮನ್ವಯ ಸಭೆ
ಜಿಲ್ಲೆಯಲ್ಲಿ ʼತಂಬಾಕು ಮುಕ್ತ ಯುವ ಅಭಿಯಾನ 3.0ʼ ಶಿಸ್ತುಬದ್ಧವಾಗಿ ನಡೆಯಲಿ : ಡಿಸಿ ನಿತೀಶ್ ಕೆ. ಸೂಚನೆ
ರಾಯಚೂರು : ತಂಬಾಕು ಮುಕ್ತ ಸಮಾಜ ನಿರ್ಮಾಣ ಗುರಿ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ನೀಡಿದ ಮಾರ್ಗಸೂಚಿಯಂತೆ ರಾಯಚೂರು ಜಿಲ್ಲೆಯಲ್ಲಿ ತಂಬಾಕು ಮುಕ್ತ ಯುವ ಅಭಿಯಾನ 3.0 ಅಚ್ಚುಕಟ್ಟಾಗಿ ನಡೆಯಬೇಕು ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಆರೋಗ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ನ.6ರ ಗುರುವಾರದಂದು ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಂಬಾಕಿನ ಹಾನಿಕಾರಕ ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಜಿಲ್ಲೆಯಲ್ಲಿ ಕನಿಷ್ಠ 30 ಗ್ರಾಮಗಳನ್ನು ತಂಬಾಕು ಮುಕ್ತ ಗ್ರಾಮವನ್ನಾಗಿ ಘೋಷಿಸಬೇಕು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದೊಂದಿಗೆ ಅಭಿಯಾನದಲ್ಲಿ ಯುವಕರನ್ನು ತಂಬಾಕಿನ ಹಸ್ತಕ್ಷೇಪದಿಂದ ರಕ್ಷಿಸಲು ಸಾಮಾಜಿಕ ಮಾಧ್ಯಮದ ಮೂಲಕ ಅರಿವು ಮೂಡಿಸಬೇಕು ಎಂದು ಹೇಳಿದರು.
ತಂಬಾಕು ನಿಯಂತ್ರಣ ಕಾರ್ಯಕ್ರಮದ ಬಗ್ಗೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಅರಿವು ಮೂಡಿಸಬೇಕು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಲಕ ಜಿಲ್ಲೆಯಲ್ಲಿ ಕನಿಷ್ಠ 30 ಐಇಸಿ ಅಭಿಯಾನ ನಡೆಸಬೇಕು. ಶಿಕ್ಷಣ ಇಲಾಖೆಯ ಮೂಲಕ ಜಿಲ್ಲೆಯಲ್ಲಿ ಕನಿಷ್ಠ 400 ಶಾಲಾ, ಕಾಲೇಜುಗಳನ್ನು ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಯಾಗಿ ಘೋಷಿಸಿಲು ಕ್ರಮಕೈಗೊಳ್ಳಬೇಕು. ಇತರ ಇಲಾಖೆಯ ಹಾಗೂ ಸರ್ಕಾರೇತರ ಸಂಸ್ಥೆಯ ಸಹಯೋಗದೊಂದಿಗೆ ವಿವಿಧ ಚಟುವಟಿಕೆಗಳನ್ನು ನಡೆಸಬೇಕು ಎಂದು ತಿಳಿಸಿದರು.
ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ತಂಬಾಕು ನಿಯಂತ್ರಣ ಸಮನ್ವಯ ಸಭೆಗಳು ನಿಯಮಿತವಾಗಿ ನಡೆಯುವಂತೆ ಕ್ರಮವಹಿಸಬೇಕು. ಜಿಲ್ಲಾ ಕ್ರಿಯಾ ಯೋಜನೆಯನ್ನು ರೂಪಿಸಿ ಅಭಿಯಾನ ನಡೆಸಬೇಕು. ಚಟುವಟಿಕೆಗಳ ಅನುಷ್ಠಾನ ವರದಿಯನ್ನು ಸಂಬಂಧಪಟ್ಟ ಇಲಾಖೆಯವರು ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ತಂಬಾಕು ಮುಕ್ತ ಯುವ ಅಭಿಯಾನ- 3.0 ಚಟುವಟಿಕೆಗಳನ್ನು ಜಿಲ್ಲೆಯಲ್ಲಿ ಸರಿಯಾಗಿ ನಡೆಸಿ ವರದಿಯನ್ನು ರಾಜ್ಯ ಮಟ್ಟಕ್ಕೆ ನಿಗದಿತ ಎಮ್‌ಐಎಸ್ ಪೋರ್ಟಲ್ ಮೂಲಕ ಮಾಹಿತಿ ನೀಡಬೇಕು. ತಂಬಾಕು ಮುಕ್ತ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಈ ಅಭಿಯಾನಕ್ಕೆ ಶಾಲಾ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ವಾರ್ತಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಪ್ರಕಟಣೆಗಳ ಬಿಡುಗಡೆ :
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಪ್ರಕಟಿಸಿದ ಜನಜಾಗೃತಿ ಪ್ರಕಟಣೆಗಳನ್ನು ಇದೆ ವೇಳೆ ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರಬಾಬು, ಜಿಲ್ಲಾ ಆರ್ ಸಿಎಚ್ ಅಧಿಕಾರಿ ಡಾ.ನಂದಿತಾ ಎನ್ ಎಮ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಗಣೇಶ ಕೆ., ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ಹೆಚ್ ದಾಸಪ್ಪನವರ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ, ವಾರ್ತಾ ಇಲಾಖೆಯ ವಾರ್ತಾ ಸಹಾಯಕರಾದ ಗವಿಸಿದ್ದಪ್ಪ ಹೊಸಮನಿ, ತಂಬಾಕು ನಿಯಂತ್ರಣ ಕಾರ್ಯಕ್ರಮದ ಸಿಬ್ಬಂದಿ ಪ್ರಿಯಾಂಕ ರೇವಣಕರ, ಯಂಕೋಬಾ ಸರ್ಜಾಪುರ, ಅಣ್ಣಪೂರ್ಣಬಾಯಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.