ರಾಯಚೂರು | ವಾಹನ ಚಲಾಯಿಸುತ್ತಿದ್ದ ವೇಳೆ ಹೃದಯಾಘಾತ : ಚಾಲಕ ಮೃತ್ಯು
Update: 2025-10-30 12:00 IST
ರಾಯಚೂರು : ರಾಯಚೂರು ತಾಲೂಕಿನ ಗಾರಲದಿನ್ನಿ ಸಮೀಪ ಹತ್ತಿ ತುಂಬಿಕೊಂಡು ಮಾರಾಟಕ್ಕೆ ತೆರಳುತ್ತಿದ್ದ ಪಿಕ್‌ಅಪ್ ವಾಹನದ ಚಾಲಕನಿಗೆ ಹೃದಯಾಘಾತ ಸಂಭವಿಸಿದ ಪರಿಣಾಮ ವಾಹನ ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ನಡೆದಿದೆ.
ಮೃತ ಚಾಲಕನನ್ನು ನರಸಿಂಹ (33) ಎಂದು ಗುರುತಿಸಲಾಗಿದೆ. ಬೆಳಿಗ್ಗೆ ಹತ್ತಿ ತುಂಬಿಕೊಂಡು ರಾಯಚೂರು ಮಾರುಕಟ್ಟೆ ಕಡೆ ತೆರಳುತ್ತಿದ್ದ ವೇಳೆ ಚಾಲಕನಿಗೆ ಎದೆನೋವು ಕಾಣಿಸಿಕೊಂಡಿದ್ದು, ನಿಯಂತ್ರಣ ತಪ್ಪಿದ ವಾಹನ ಪಕ್ಕದ ಜಮೀನಿಗೆ ಪಲ್ಟಿಯಾಗಿದೆ.
ಚಾಲಕನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ವಾಹನದಲ್ಲಿ ತುಂಬಿದ್ದ ಹತ್ತಿ ಹೊಲದಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿದೆ.