ರಾಯಚೂರು | ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ ಮಾಜಿ ಶಾಸಕ ಒತ್ತಾಯ
ರಾಯಚೂರು : ಈ ಹಿಂದೆ ನಗರದ ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ 2 ಕೋಟಿ ರೂ. ಬಿಡುಗಡೆಯಾಗಿದ್ದನ್ನು ಸರ್ಕಾರ ವಾಪಸ್ ಪಡೆದಿತ್ತು. ಜಿಲ್ಲೆಯ ಜನಪ್ರತಿನಿಧಿಗಳು ಮುತುವರ್ಜಿ ವಹಿಸಿ ಅಗತ್ಯ ಅನುದಾನ ಬಿಡುಗಡೆ ಮಾಡಿಸಿ ಕ್ರೀಡಾಪಟುಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಮಾಜಿ ಶಾಸಕ ಹಾಗೂ ಜಿಲ್ಲಾ ಅಥ್ಲೇಟಿಕ್ ಅಸೋಸಿಯೇಶನ್ ಅಧ್ಯಕ್ಷ ಎ.ಪಾಪಾರೆಡ್ಡಿ ಒತ್ತಾಯಿಸಿದರು.
ಅವರಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಕ್ರೀಡಾಂಗಣದ ಒಳಗೆ ಓಟದ ಸ್ಪರ್ಧೆ, ಭರ್ಚಿ, ಗುಂಡು ಎಸೆತ, ಉದ್ದ ಜಿಗಿತ, ಎತ್ತರ ಜಿಗಿತ ಸೇರಿದಂತೆ ಇತರೆ ಕ್ರೀಡಾಪಟುಗಳು ಅಭ್ಯಾಸ ಮಾಡಲು ಸಿಂಥೆಟಿಕ್ ಟ್ರ್ಯಾಕ್ ಇಲ್ಲದೇ. ಇಲ್ಲಿ ಕ್ರೀಡಾಪಟುಗಳ ವಸತಿನಿಲಯವಿದ್ದರೂಸೂಕ್ತ ಸೌಲಭ್ಯ ಕಲ್ಪಿಸಿಲ್ಲ ಹೀಗಾಗಿ ಕ್ರೀಡಾಪಟುಗಳಲ್ಲಿ ಹಿಂದೆ ಬೀಳುವಂತಾಗಿದೆ ಎಂದು ದೂರಿದರು.
ಈ ಭಾಗದ ವಿದ್ಯಾರ್ಥಿಗಳಿಗೆ ಹಾಗೂ ಅಥ್ಲೆಟಿಕ್ ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸುವ ಕೆಲಸ ಜಿಲ್ಲೆಯ ಜನಪ್ರತಿನಿಧಿಗಳು ಮಾಡಬೇಕು ಎಂದರು.
ರಾಜ್ಯದ ಅಥ್ಲೆಟಿಕ್ ಅಸೋಸಿಯೇಷನ್ ರಾಜ್ಯ-ರಾಷ್ಟ್ರೀಯ ಕ್ರೀಡೆಗೆ ಅವಕಾಶ ನೀಡುತ್ತಿಲ್ಲ. ಇದರಿಂದ ಜಿಲ್ಲೆಯ ಅನೇಕ ಕ್ರೀಡಾಪಟುಗಳು ಹಾಗೂ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೀರಾ ಹಿನ್ನಡೆ ಅನುಭವಿಸುವಂತೆ ಆಗಿದೆ. ಕೂಡಲೇ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿ ಕ್ರೀಡಾಪಟುಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಪಿ.ಚಂದ್ರಶೇಖರ ರೆಡ್ಡಿ, ಕೆ.ತಿಮ್ಮಾರೆಡ್ಡಿ, ರಾಜಕುಮಾರ, ಎನ್.ಶ್ರೀನಿವಾಸ ರೆಡ್ಡಿ, ಭಗತ್ ಸಿಂಗ್, ಬೆಲ್ಲಂ ಕಿರಣ, ಮೃತ್ಯುಂಜಯ ಎಂ., ಎಂ.ಶ್ರೀನಿವಾಸ ಯಾದವ್, ಎಸ್.ಕೆ. ನಾಗರೆಡ್ಡಿ, ನರಸಪ್ಪ ಉಪಸ್ಥಿತರಿದ್ದರು.