×
Ad

ರಾಯಚೂರು | ವ್ಯಕ್ತಿ ಮುಖ್ಯವಲ್ಲ ವ್ಯಕ್ತಿಯ ಸಾಧನೆ ಮುಖ್ಯ : ಶಾಂತಮಲ್ಲ ಶಿವಾಚಾರ್ಯ ಸ್ವಾಮಿ

Update: 2025-02-09 19:16 IST

ರಾಯಚೂರು: ವ್ಯಕ್ತಿ ಮುಖ್ಯವಲ್ಲ ವ್ಯಕ್ತಿಯ ಸಾಧನೆ ಮುಖ್ಯ, ವ್ಯಕ್ತಿಗೆ ಸಾವಿದೆ, ಸಾಹಿತ್ಯಕ್ಕೆ ಸಾವಿಲ್ಲ ಎಂದು ರಾಯಚೂರಿನ ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮಿ ಹೇಳಿದರು.

ನಗರದ ಕನ್ನಡ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕೋಟೆ ಅಧ್ಯಯನ ಸಮತಿ ರಾಯಚೂರುಗಳ ಸಂಯುಕ್ತಾಶ್ರಯದಲ್ಲಿ ಇಂದು ಆಯೋಜಿಸಿದ್ದ ಲಕ್ಷ್ಮೀದೇವಿ ಶಾಸ್ತ್ರಿ ಅವರು, ಸಂಪಾದಿಸಿದ್ದ ಮರೆಯಲಾಗದ ಸಂಶೋಧಕ ದುರ್ಗಾ ಜಗದೀಶ ಮತ್ತು ದುರ್ಗಾ ಜಗದೀಶರ ಸಂಶೋಧನೆಗಳು ಎರಡು ಕೃತಿಗಳು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.

ಇಂದಿನ ಕಾಲದಲ್ಲಿ ಸಣ್ಣ ಸಣ್ಣ ಸಾಹಿತಿಗಳ ಪುಸ್ತಕವನ್ನು ಹೊರ ತರುವುದಕ್ಕೆ ಸಾಧ್ಯವಾಗುತ್ತಿಲ್ಲ. ಪರಂತು ತಾಲೂಕು ಸಾಹಿತ್ಯ ಪರಿಷತ್ತು ಹಾಗೂ ಕೋಟೆ ಅಧ್ಯಯನ ಸಮಿತಿಯವರು ಸಾಹಿತಿಗಳ ಪುಸ್ತಕವನ್ನು ಲೋಕಾರ್ಪಣೆ ಮಾಡಿ ಸಾಹಿತ್ಯಗಳ ಬೆಳವಣಿಗೆಗೆ ಮುಂದಾಗುತ್ತಿದ್ದಾರೆ ಎಂದರು.

ದುರ್ಗಾ ಜಗದೀಶ್ ಅವರ ಸಂಶೋಧನಾ ಬರಹಗಳು ಇಂದು ಪುಸ್ತಕ ರೂಪದಲ್ಲಿ ಲೋಕಾರ್ಪಣೆ ಆಗಿದ್ದು, ಅವರ ಆತ್ಮ ಖುಷಿ ಪಟ್ಟಿದೆ ಎಂದರು.

ಕೃತಿಗಳ ಲೋಕಾರ್ಪಣೆ ಮಾಡಿ ಮಾತನಾಡಿದ ರಾಯಚೂರು ಕೋಟೆ ಅಧ್ಯಯನ ಸಮಿತಿಯ ಗೌರವಾಧ್ಯಕ್ಷ ಜಯಣ್ಣ, ಸಾಹಿತ್ಯ ವಲಯದಲ್ಲಿ ಅನೇಕ ಸಾಹಿತಿಗಳು, ಬರಹಗಾರರು ತಮ್ಮ ಬರಹಗಳ ಮೂಲಕ ಸಮಾಜಕ್ಕೆ ಪರಿಚಿತರಾಗುತ್ತಿದ್ದಾರೆ, ದುರ್ಗಾ ಜಗದೀಶ ಅವರು ಕೂಡ ಸರಳ ವ್ಯಕ್ತಿತ್ವದ ವ್ಯಕ್ತಿಯಾಗಿ, ಸಂಶೋಧಕನಾಗಿ ಅನೇಕ ಲೇಖನಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಅವರಿಲ್ಲದಿದ್ದರೂ ಈಗ ಅವರ ಸಂಶೋಧನೆಗಳು ಹೊರ ತರುವ ಕೆಲಸ ಮಾಡಿದ್ದು ಶ್ಲಾಘನೀಯ.

ರಾಯಚೂರಿನ ಸಾಹಿತಿಗಳಾದ ಚನ್ನಬಸವ ಹಿರೇಮಠ ಅವರು ದುರ್ಗಾ ಜಗದೀಶ ಅವರ ಸಂಶೋಧನೆ ಕೃತಿ ಪರಿಚಯಿಸಿ ಮಾತನಾಡುತ್ತಾ, ರಾಯಚೂರು ಜಿಲ್ಲೆಯಲ್ಲಿ ಇಂದಿನವರೆಗೂ ಒಬ್ಬ ಗಟ್ಟಿಯಾದ ಜಾನಪದ ತಜ್ಞ ಹುಟ್ಟಿಲ್ಲ. ಇಂದು ಕಣ್ಮರೆಯಾಗಿ ಹೋಗುತ್ತಿರುವ ಲೇಖನಗಳನ್ನು ದುರ್ಗಾ ಜಗದೀಶ ಅವರು ತಮ್ಮ ಲೇಖನಗಳಲ್ಲಿ ಅಳವಡಿಸಿ ಸಮಾಜಕ್ಕೆ ತಮ್ಮ ಬರವಣಿಗೆಯ ಮೂಲಕ ಕೊಟ್ಟಿದ್ದಾರೆ. ಒಬ್ಬ ಸಂಶೋಧಕನು ಸರಳ ಬರವಣಿಗೆಯನ್ನು ಹೊಂದಿರಬೇಕು, ರಾಯಚೂರು ಜಿಲ್ಲೆಗೆ ದುರ್ಗಾ ಜಗದೀಶ ಅವರ ಪುಸ್ತಕಗಳು ಕೈ ತುತ್ತು ಇದ್ದ ಹಾಗೆ, ತನ್ನ ಆಸಕ್ತಿದಾಯಕ ವಿಷಯಗಳನ್ನು ಸಹೃದಯದವರೊಂದಿಗೆ ಹಂಚಿಕೊಳ್ಳುತ್ತಿದ್ದರು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅವರು ಮರೆಯಲಾಗದ ಸಂಶೋಧಕ ದುರ್ಗ ಜಗದೀಶ ಕೃತಿಯನ್ನು ಮಂಜುನಾಥ ಐಲಿ ಪರಿಚಯಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವೆಂಕಟೇಶ ಬೇವಿನಬೆಂಚಿವಹಿಸಿದರು.

ಕಾರ್ಯಕ್ರಮದಲ್ಲಿ ಕೃತಿಕಾರರಾದ ಲಕ್ಷ್ಮೀದೇವಿ ಶಾಸ್ತ್ರಿ, ಶರಣಮ್ಮ ದುರ್ಗಾ ಜಗದೀಶ್, ವಿಶ್ವನಾಥ ಶಾಸ್ತ್ರಿ ಸೇರಿದಂತೆ ಇತರರು ವೇದಿಕೆ ಮೇಲೆ ಇದ್ದರು. ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಅಯ್ಯಪಯ್ಯ ಹುಡಾ ,ಆಂಜನೇಯ ಜಾಲಿಬೆಂಚಿ, ರೇಖಾ ಬಡಿಗೇರ್, ಹಫೀಜುಲ್ಲಾ, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಕೋಟೆ ಅಧ್ಯಯನ ಸಮಿತಿ ಸದಸ್ಯರು ಮತ್ತು ದುರ್ಗಾ ಜಗದೀಶ್ ಅವರ ಕುಟುಂಬ ಅಭಿಮಾನಿಗಳು ಇದ್ದರು. ಶ್ರೀದೇವಿ ದುರ್ಗ ಪ್ರಾರ್ಥಿಸಿದರು, ವೈಶಾಲಿ ಪಾಟೀಲ ನಿರೂಪಿಸಿದರು. ಡಾ. ಬಿ ವಿಜಯರಾಜೇಂದ್ರ ಸ್ವಾಗತಿಸಿದರು, ರಾವುತರಾವ್ ಬರೂರು ವಂದಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News