×
Ad

ರಾಯಚೂರು | ಕೆಡಿಪಿ ಪ್ರಗತಿ ಪರಿಶೀಲನಾ ಸಭೆ

Update: 2025-01-24 17:12 IST

ರಾಯಚೂರು : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ರಾಯಚೂರು ಜಿಲ್ಲೆಯ ಎಲ್ಲಾ ವಸತಿ ನಿಲಯಗಳಲ್ಲಿ ಮೂಲ ಸೌಕರ್ಯ, ಅಲ್ಲಿನ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಿ ವಸತಿ ನಿಲಯಗಳಲ್ಲಿ ಶಿಸ್ತು ಕಾಪಾಡಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಜ.24ರಂದು ಮುಂದುವರೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಸತಿ ನಿಲಯಗಳಿಗೆ ಅವಶ್ಯವಿರುವ ಕಡೆಗಳಲ್ಲಿ ಸಿಎ ಸೈಟ್ ಗುರುತಿಸಿ ಕಟ್ಟಡ ನಿರ್ಮಾಣಕ್ಕೆ ಕ್ರಮ ವಹಿಸಬೇಕು. ಜಿಲ್ಲೆಯ ಯಾವ ಯಾವ ಕಡೆಗಳಲ್ಲಿ ವಸತಿ ನಿಲಯಗಳಿಗೆ ಕಟ್ಟಡ ನಿರ್ಮಾಣಕ್ಕೆ ಜಾಗದ ಕೊರತೆ ಇದೆ ಎಂಬುದರ ಬಗ್ಗೆ ಇಲಾಖೆಯ ಅಧಿಕಾರಿಗಳು ಜಿಪಂ ಸಿಇಓ ಅವರೊಂದಿಗೆ ಚರ್ಚಿಸಿ ಕೂಡಲೇ ಜಾಗ ಪಡೆದು ಕಟ್ಟಡ ನಿರ್ಮಾಣಕ್ಕೆ ಕ್ರಮ ವಹಿಸಬೇಕು. ಕಟ್ಟಡ ನಿರ್ಮಾಣಕ್ಕೆ ಬೇಕಾದ ಅನುದಾನ, ಜಾಗದ ಅವಶ್ಯಕತೆಯ ಬಗ್ಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸಚಿವರು ತಿಳಿಸಿದರು.

ತಾಲೂಕು ಅಧಿಕಾರಿಗಳಿಗೆ ಸೂಚನೆ :

ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗಳ ವಸತಿ ನಿಲಯಗಳಿಗೆ ಆಹಾರ ಪೂರೈಕೆಯ ಟೆಂಡರ್ ಪಡೆದ ಏಜೆನ್ಸಿದಾರರು ಪ್ರತಿ ಮಾಹೆ 5ನೇ ತಾರೀಖಿನೊಳಗೆ ಟೆಂಡರ್ ಪಡೆದ ಪೂರ್ಣ ಮಾಲನ್ನು ವಸತಿ ನಿಲಯಗಳಿಗೆ ತಲುಪಿಸಿದ ಬಗ್ಗೆ ದಾಸ್ತಾನು ಸ್ವೀಕೃತಿ ರಶೀದಿ ಪಡೆಯಬೇಕು. ಈ ಬಗ್ಗೆ ಜಿಲ್ಲಾ ಹಾಗೂ ಪ್ರತಿ ತಾಲೂಕಿನ ಅಧಿಕಾರಿಗಳು ಸೂಕ್ತ ಮೇಲ್ವಿಚಾರಣೆ ಮಾಡಬೇಕು ಎಂದು ಸಚಿವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಜಿಪಂ ಸಿಇಓಗೆ ಸೂಚನೆ :

ಆಯಾ ವಸತಿ ನಿಲಯಗಳಿಗೆ ನಿಯಮಿತವಾಗಿ ಭೇಟಿ ಮಾಡಿ ಪರಿಶೀಲಿಸಿದ ಬಗ್ಗೆ, ವಸತಿ ನಿಲಯಗಳ ಮೇಲೆ ನಿಯುಕ್ತಿಯಾದ ನೋಡಲ್ ಅಧಿಕಾರಿಗಳಿಂದ ವರದಿ ಪಡೆದು, ವಸತಿ ನಿಲಯಗಳಲ್ಲಿನ ವ್ಯವಸ್ಥೆಯ ಬಗ್ಗೆ ಯಾವುದೇ ರೀತಿಯ ದೂರುಗಳು ಬಾರದ ಹಾಗೆ ಸೂಕ್ತ ಮೇಲ್ವಿಚಾರಣೆ ಮಾಡಬೇಕು. ಜಿಲ್ಲೆಯಲ್ಲಿನ ಎಲ್ಲಾ ವಸತಿ ನಿಲಯಗಳ ಸೂಕ್ತ ಮೇಲ್ವಿಚಾರಣೆಗಾಗಿ ಕೂಡಲೇ ಬಾಕಿ ಇರುವ ಕಡೆಗೆ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು ಎಂದು ಇದೆ ವೇಳೆ ಸಚಿವರು, ಜಿಪಂ ಸಿಇಓ ಅವರಿಗೆ ಸೂಚನೆ ನೀಡಿದರು.

ಫಲಿತಾಂಶ ಸುಧಾರಿಸಬೇಕು :

ರಾಯಚೂರು ಜಿಲ್ಲೆಯ ಎಸೆಸೆಲ್ಸಿ ಮತ್ತು ಪಿಯುಸಿ ಫಲಿತಾಂಶವು ಇಡೀ ರಾಜ್ಯದಲ್ಲಿಯೇ ಕಳಪೆ ಇದೆ ಎಂದು ಸಭೆಗೆ ತಿಳಿಸಿದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರ ಪ್ರಶ್ನೆ ಮೇಲೆ ಚರ್ಚಿಸಿದ ಸಚಿವರು, ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ ಮತ್ತು ಮೈನಾರಿಟಿ ವಸತಿ ನಿಲಯದಲ್ಲಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆತು ಅವರ ಫಲಿತಾಂಶ ಸುಧಾರಣೆಗೆ ಒತ್ತು ಕೊಡಬೇಕು ಎಂದರು.

ಗುಣಮಟ್ಟದ ಆಹಾರ ಪೂರೈಕೆಯ ಪರಿಶೀಲನೆ ಜತೆಗೆ ಅಲ್ಲಿನ ವಿದ್ಯಾರ್ಥಿಗಳ ಓದು, ಬರೆಹ, ಅವರ ಆರೋಗ್ಯದ ಪ್ರಗತಿಯ ಬಗ್ಗೆ ಸಹ ಪರಿಶೀಲನಾ ಕಾರ್ಯ ಆಗಬೇಕು. ಆದಾಗ್ಯೂ ಎಸೆಸೆಲ್ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ಕುಸಿತ ಕಂಡು ಬಂದಲ್ಲಿ ಆಯಾ ವಸತಿ ನಿಲಯಗಳ ವಾರ್ಡನ್, ವಸತಿ ನಿಲಯಗಳಿಗೆ ನಿಯೋಜನೆಯಾದ ನೋಡಲ್ ಅಧಿಕಾರಿ ಮತ್ತು ತಾಲೂಕು ಅಧಿಕಾರಿಯನ್ನೇ ಹೊಣೆಯಾಗಿಸಿ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.

ನಿಲಯಗಳ ಸುಧಾರಣೆಗೆ ಆದ್ಯತೆ ಕೊಡಿ :

ಸರಕಾರವು ಬಡ ಮಕ್ಕಳ ಶಿಕ್ಷಣಕ್ಕೆ ನೀಡುವ ಅನುದಾನವು ಸದ್ಬಳಕೆಯಾಗಬೇಕು. ಈ ನಿಟ್ಟಿನಲ್ಲಿ ವಸತಿ ನಿಲಯಗಳ ಸುಧಾರಣೆಗೆ ಮೊದಲ ಆದ್ಯತೆ ಕೊಡಬೇಕು ಎಂದು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷರು ಆಗಿರುವ ಮಸ್ಕಿ ಕ್ಷೇತ್ರದ ಶಾಸಕರಾದ ಬಸನಗೌಡ ತುರವಿಹಾಳ ಅವರು ಹೇಳಿದರು.

ಬ್ಲಾಕ್ ಲೀಸ್ಟ್ ಗೆ ಹಾಕಿ :

ವಸತಿ ನಿಲಯಗಳಿಗೆ ಆಹಾರ ಪೂರೈಕೆ ಮಾಡುವ ಏಜೆನ್ಸಿಗಳ ಮೇಲೆ ಸಹ ಮಾನಿಟರ್ ಆಗಬೇಕು. ಪ್ರತಿ ಬಾರಿ ಒಂದೇ ಏಜೆನ್ಸಿಗೆ ಟೆಂಡರ್ ಕೊಡುವುದು ತಪ್ಪಬೇಕು ಎಂದು ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರ ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು ಹೇಳಿದರು.

ಶಿಕ್ಷಕರ ಕೊರತೆ ತಪ್ಪಿಸಿ :

ದೇವದುರ್ಗ ತಾಲೂಕಿನಲ್ಲಿ ಶಿಕ್ಷಣ ಇಲಾಖೆಯಲ್ಲಿ ಕೊರತೆಯಿದ್ದರೂ ಸಮಾಜ ಕಲ್ಯಾಣ ಇಲಾಖೆ ತೆಗೆದುಕೊಂಡ ಶಿಕ್ಷಕರನ್ನು ಕೂಡಲೇ ಬಿಡುಗಡೆಗೊಳಿಸಿ ಮಾತೃ ಇಲಾಖೆಗೆ ಕಳುಹಿಸಬೇಕು ಎಂದು ಶಾಸಕರಾದ ಕರೆಮ್ಮ ಜಿ.ನಾಯಕ ಅವರು ಸಭೆಗೆ ತಿಳಿಸಿದರು.

ಕಟ್ಟಡ ನಿರ್ವಹಣೆ ಸಮರ್ಪಕವಾಗಿರಲಿ :

ಮಾನ್ವಿ ತಾಲೂಕಿನಲ್ಲಿ ಕಟ್ಟಿರುವ ಕೆಲವು ಸರ್ಕಾರಿ ಕಟ್ಟಡಗಳು ಸರಿಯಾದ ನಿರ್ವಹಣೆ ಇಲ್ಲದೇ ದುಸ್ಥಿತಿಯಲ್ಲಿದ್ದು, ಅವಶ್ಯವಿರುವ ಇಲಾಖೆಗೆ ಕೂಡಲೇ ಹಸ್ತಾಂತರಿಸುವ ಪ್ರಕ್ರಿಯೆ ನಡಸಬೇಕು ಎಂದು ಮಾನ್ವಿ ಶಾಸಕರಾದ ಜಿ.ಹಂಪಯ್ಯ ನಾಯಕ ಅವರು ಸಭೆಗೆ ತಿಳಿಸಿದರು.

ಕೀಳುಮಟ್ಟದ ನಿರ್ವಹಣೆ :

ಬಹುತೇಕ ವಸತಿ ನಿಲಯಗಳಲ್ಲಿ ಪೂರ್ಣಾವಧಿಯಲ್ಲಿ ವಾರ್ಡನ್‌ಗಳಿಲ್ಲದೇ ಕೀಳುಮಟ್ಟದ ನಿರ್ವಹಣೆಯಿದೆ ಎಂದು ವಿಧಾನ ಪರಿಷತ್ ಶಾಸಕರಾದ ಎ.ವಸಂತಕುಮಾರ ಅವರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ದನಿಗೂಡಿಸಿದ ಶಾಸಕರಾದ ಬಸನಗೌಡ ಬಾದರ್ಲಿ ಅವರು, ಸಿಂಧನೂರಿನಲ್ಲಿ ಹಾಸ್ಟೆಲ್‌ಗಳಿಗೆ ಭೇಟಿ ಮಾಡಿ ಪರಿಶೀಲನೆ ನಡೆಸಿದ ವೇಳೆಯಲ್ಲಿ ಅಲ್ಲಿ ಕಳಪೆ ಮಟ್ಟದ ಆಹಾರ ಪೂರೈಕೆ ಜೊತೆಗೆ ಮೌಲಸೌಕರ್ಯ ಕೊರತೆಯಿರುವುದು ಕಂಡು ಬಂದಿದೆ ಎಂದರು. ದೇವದುರ್ಗ ತಾಲೂಕಿನಲ್ಲೂ ಇದೆ ಸ್ಥಿತಿಯಿದೆ ಎಂದು ದೇವದುರ್ಗ ಶಾಸಕರು ಹೇಳಿದರು.

ವಸತಿ ನಿಲಯಗಳ ಸಂಖ್ಯೆ ಹೆಚ್ಚಿಸಿ :

ಹಿಂದುಳಿದ ರಾಯಚೂರು ಜಿಲ್ಲೆಗೆ ವಿದ್ಯಾರ್ಥಿಗಳ ಅಗತ್ಯಕ್ಕೆ ತಕ್ಕಂತೆ ಮೊರಾರ್ಜಿ ವಸತಿ ಶಾಲೆ ಸೇರಿದಂತೆ ಇನ್ನೀತರ ವಸತಿ ನಿಲಯಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ನಾಮ ನಿರ್ದೇಶಿತ ಸದಸ್ಯರಾದ ತಿಮ್ಮಪ್ಪ ಮಲ್ಲಯ್ಯ ಹಾಗೂ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಪಾಮಯ್ಯ ಮುರಾರಿ ಹಾಗೂ ಇನ್ನಿತರರು ಸಭೆಗೆ ಮನವಿ ಮಾಡಿದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ಸಿಂಧನೂರ ಕ್ಷೇತ್ರದ ಶಾಸಕರಾದ ಹಂಪನಗೌಡ ಬಾದರ್ಲಿ, ನಾಮ ನಿರ್ದೇಶಿತ ಸದಸ್ಯರಾದ ಸೋಮಶೇಖರ ಪಾಟೀಲ, ಮೀನಾಕ್ಷಿ ರಾಮಸ್ವಾಮಿ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಜಿಪಂ ಸಿಇಓ ರಾಹುಲ್ ತುಕಾರಾಮ ಪಾಂಡ್ವೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಂ ಪುಟ್ಟಮಾದಯ್ಯ, ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ಅಕ್ರಮ ಮರಳು ಮಾರಾಟಕ್ಕೆ ಶಾಸಕರಿಂದ ವಿರೋಧ :

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ, ವಿಧಾನ ಪರಿಷತ್ ಶಾಸಕರಾದ ಬಸನಗೌಡ ಬಾದರ್ಲಿ ಅವರು ಮಾತನಾಡಿ, ರಾಯಚೂರು ಜಿಲ್ಲೆಯಲ್ಲಿ ಅಕ್ರಮ ಮರಳು ಮಾರಾಟವು ಅವ್ಯಾಹತವಾಗಿ ನಡೆಯುತ್ತಿದೆ. ಜಿಲ್ಲಾದ್ಯಂತ ಎಲ್ಲೆಡೆ ನಡೆಯುತ್ತಿರುವ ಈ ಅಕ್ರಮ ಮರಳು ಸಾಗಣೆಯ ಅವ್ಯವಹಾರಕ್ಕೆ ಕಡಿವಾಣ ಹಾಕಲೇಬೇಕು ಎಂದು ಇದೆ ವೇಳೆ ಸಿಂಧನೂರ ಕ್ಷೇತ್ರದ ಶಾಸಕ ಹಂಪನಗೌಡ ಬಾದರ್ಲಿ, ದೇವದುರ್ಗ ಶಾಸಕಿ ಕರೆಮ್ಮ ಜಿ.ನಾಯಕ, ಎ ವಸಂತಕುಮಾರ ಅವರು ಧನಿಗೂಡಿಸಿದರು.

ಲಾರಿ ಚಾಲಕರು ಮಣ್ಣನ್ನು ಮಿತಿಮೀರಿ ತುಂಬಿ ಸಂಚರಿಸುತ್ತಿದ್ದು, ಇದರಿಂದಾಗಿ ರಸ್ತೆಗಳು ಸಹ ಹಾಳಾಗಿ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ರಸ್ತೆ ಸರಿ ಇಲ್ಲ ಎಂದು ವಿದ್ಯಾರ್ಥಿಗಳು ದೂರುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ರಾಯಚೂರು ಗ್ರಾಮೀಣ ಶಾಸಕರಾದ ಬಸನಗೌಡ ದದ್ಧಲ್ ಅವರು ಆರ್ ಟಿಓ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮರಳು ಮಾರಾಟ ವ್ಯವಸ್ಥೆಯ ಬಗ್ಗೆ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ರಾಯಚೂರು ಜಿಲ್ಲಾದ್ಯಂತ ನಡೆಯುತ್ತಿದೆ ಎನ್ನಲಾದ ಅಕ್ರಮ ಮರಳು ಮಾರಾಟಕ್ಕೆ ಕಡಿವಾಣ ಹಾಕಲು ತುರ್ತಾಗಿ ಕ್ರಮ ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಇನ್ನಿತರ ಇಲಾಖೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಆನ್ ಲೈನ್ ಈ ಪ್ರಕ್ಯುರಮೆಂಟ್ ಮೂಲಕ ಸ್ಯಾಂಡ್ ಬ್ಲಾಕ್ ಅಲಾಟಮೆಂಟ್ ಮಾಡಿ ಹದಿನೈದು ದಿನದಲ್ಲಿ ಸಾರ್ವಜನಿಕರಿಗೆ ಮರಳು ಸಿಗುವಂತೆ ಸರಳೀಕರಣಕ್ಕೆ ಕ್ರಮ ವಹಿಸಲಾಗುವುದು.

ಈಗಾಗಲೇ ಸರ್ಕಾರವು ಆನ್ ಲೈನ್ ಮೂಲಕ ಸ್ಯಾಂಡ್ ಬ್ಲಾಕ್ ಅಲಾಟಮೆಂಟ್ ಮಾಡಲು ಅವಕಾಶ ಕಲ್ಪಿಸಿದೆ. ಈ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಕೂಡ ಸ್ಯಾಂಡ್ ಬ್ಲಾಕ್ ಗಳನ್ನು ಆನ್ ಲೈನ್ ಈ ಪ್ರಕ್ಯೂರಮೆಂಟ್ ಮೂಲಕ ಮಂಜೂರು ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಸಭೆಗೆ ಮಾಹಿತಿ ನೀಡಿದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News