ರಾಯಚೂರು | ವ್ಯವಸ್ಥೆಯ ಸುಧಾರಣೆಯಲ್ಲಿ ವಕೀಲರ ಪಾತ್ರ ದೊಡ್ಡದು : ಸಚಿವ ಎನ್.ಎಸ್.ಭೋಸರಾಜು
ರಾಯಚೂರು : ವಕೀಲರು ತಮ್ಮ ವೃತ್ತಿಯ ಬದ್ಧತೆಯ ಜೊತೆಗೆ ವ್ಯವಸ್ಥೆಯ ಬದಲಾವಣೆ ಮತ್ತು ಸಮಾಜದ ಅಭಿವೃದ್ಧಿಗಾಗಿ ಧ್ವನಿ ಎತ್ತಬೇಕು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ, ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಸಲಹೆ ನೀಡಿದರು.
ರಾಯಚೂರು ನ್ಯಾಯವಾದಿಗಳ ಸಂಘದ ವತಿಯಿಂದ ನಗರದ ರಂಗಮಂದಿರದಲ್ಲಿ ಜನಪ್ರತಿನಿಧಿಗಳಿಗೆ ಹಮ್ಮಿಕೊಂಡಿದ್ದ ವಿಶೇಷ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಕೀಲರು ಪ್ರಜ್ಞಾವಂತ ಸಮುದಾಯ. ದೊಡ್ಡ ಸಂಖ್ಯೆಯಲ್ಲಿ ಈ ದೇಶದ ಸ್ವಾತಂತ್ರ್ಯ ಹೋರಾಟಗಾರದಲ್ಲೂ ವಕೀಲರು ಭಾಗವಹಿಸಿದ್ದರು ಎಂದು ಹೇಳಿದರು.
ಆಡಳಿತದಲ್ಲಿ ಯಾವುದೇ ಸರ್ಕಾರ ಹಾಗೂ ಪಕ್ಷಗಳು ಇರಲಿ ಎಲ್ಲರ ವಿರುದ್ದ ಅವರು ತಪ್ಪು ಮಾಡಿದಾಗ ಅವರನ್ನು ಎಚ್ಚರಿಸುವ ಕೆಲಸ ಮಾಡಬೇಕು. ನಮ್ಮ ದೇಶಕ್ಕೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿರುವ ಸಂವಿಧಾನ ಮತ್ತು ಕಾನೂನುಗಳನ್ನು ಕಾಪಾಡುವಲ್ಲಿ ವಕೀಲರ ಪಾತ್ರ ಮತ್ತು ಜವಾಬ್ದಾರಿ ಬಹಳ ದೊಡ್ಡದಿದೆ. ಈ ನಿಟ್ಟಿನಲ್ಲಿ ವಕೀಲರು ಕಾರ್ಯನಿರ್ವಹಿಸಲಿ ಎಂದು ತಿಳಿಸಿದರು.
ನೂತನವಾಗಿ ನಿರ್ಮಾಣವಾಗುತ್ತಿರುವ ಜಿಲ್ಲಾ ನ್ಯಾಯಾಲಯದ ಸಂಕೀರ್ಣ ಮತ್ತು ವಕೀಲರ ಸಂಘದ ಕಚೇರಿಯ ಕಟ್ಟಡಕ್ಕೆ ಅಗತ್ಯ ಮೂಲ ಸೌಕರ್ಯಗಳ ವ್ಯವಸ್ಥೆಗೆ ಬೇಕಿರುವ ಅನುದಾನವನ್ನು ನಾನು ಕೆ.ಕೆ.ಆರ್.ಡಿ.ಬಿ ಹಾಗೂ ಜನಪ್ರತಿನಿಧಿಗಳ ಅನುದಾನ ಸೇರಿದಂತೆ ವಿವಿಧ ಅನುದಾನಗಳಲ್ಲಿ ಕೊಡಿಸುತ್ತೇನೆ.
ನಾನು ಹಾಗೂ ನಮ್ಮ ಸರ್ಕಾರ ಯಾವತ್ತೂ ವಕೀಲರ ಪರವಾಗಿದ್ದೇವೆ ಎಂದು ಹೇಳಿದರು.
ರಾಯಚೂರು ಮಹಾ ನಗರ ಪಾಲಿಕೆಯ ಮಹಾ ಪೌರರಾದ ನರಸಮ್ಮ ಮಾಡಗಿರಿಯವರೆಗೂ ವಿಶೇಷ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಯಚೂರು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಪ್ಪ ಭಂಡಾರಿ, ಉಪಾಧ್ಯಕ್ಷ ನಜೀರ್ ಅಹ್ಮದ್, ಜಂಟಿ ಕಾರ್ಯದರ್ಶಿ ಹನುಮಂತಪ್ಪ ಮೇಟಿ, ಹಿರಿಯ ವಕೀಲರಾದ ರಾಜಾ ಪಾಂಡುರಂಗ ನಾಯಕ, ಎನ್. ಶಂಕ್ರಪ್ಪ, ಶ್ರೀಕಾಂತ್ ರಾವ್, ಮಸ್ಕಿ ನಾಗರಾಜ, ಜಾವೀದ್ ಉಲ್ ಹಕ್, ಎನ್. ಶಿವಶಂಕರ್, ರಾಮನಗೌಡ, ಅಂಬಾಪತಿ ಪಾಟೀಲ್ ಜಿ.ಎಸ್. ವೀರಭದ್ರಪ್ಪ, ಸಿ. ರಾಘವೇಂದ್ರ, ಶಿವಕುಮಾರ ನಾಯಕ ದಿನ್ನಿ, ಹನುಮಂತ ರೆಡ್ಡಿ, ಗಿರಿಜಾ, ರೇಣುಕಾ, ಹನುಮಂತಪ್ಪ ಅತ್ತನೂರು, ಶಿವಕುಮಾರ ಮ್ಯಾಗಳಮನಿ ಸೇರಿದಂತೆ ಸಂಘದ ಕಾರ್ಯಕಾರಣಿ ಸಮಿತಿಯ ಸದಸ್ಯರು, ಹಿರಿಯ, ಕಿರಿಯ ಮತ್ತು ಮಹಿಳಾ ನ್ಯಾಯವಾದಿಗಳು ಉಪಸ್ಥಿತರಿದ್ದರು.