×
Ad

ರಾಯಚೂರು | ನ.15 ರಂದು ಬೃಹತ್ ಆರೋಗ್ಯ ಶಿಬಿರ, ಕಾನೂನು ಸಾಕ್ಷರತಾ ಕಾರ್ಯಕ್ರಮ

Update: 2025-11-13 16:34 IST

ರಾಯಚೂರು : ಬೆಂಗಳೂರು ಕಾನೂನು ಸೇವೆಗಳ ಪ್ರಾಧಿಕಾರ, ರಾಯಚೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಜಿಲ್ಲಾ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ನ.15ರಂದು ರಾಯಚೂರಿನಲ್ಲಿ ಬೃಹತ್ ಆರೋಗ್ಯ ಶಿಬಿರ ಹಾಗೂ ಕಾನೂನು ಸಾಕ್ಷರತಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್. ಶಶಿಧರ ಶೆಟ್ಟಿ ತಿಳಿಸಿದ್ದಾರೆ.

ಜಿಲ್ಲಾ ಕೋರ್ಟ್ ಸಂಕೀರ್ಣದ ಸಭಾಂಗಣದಲ್ಲಿ ನ.13ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಾದ್ಯಂತ ದೇವದಾಸಿ ಪದ್ಧತಿಯನ್ನು ನಿರ್ಮೂಲಗೊಳಿಸುವ ಉದ್ದೇಶದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ದೇವದಾಸಿ ಮಹಿಳೆಯರ ಸ್ಥಿತಿಗತಿ ಕುರಿತ ವಿಶೇಷ ಉಪನ್ಯಾಸ ಹಾಗೂ ಅರಿವು ಮೂಡಿಸುವ ನಾನಾ ಚಟುವಟಿಕೆಗಳು ನಡೆಯಲಿವೆ ಎಂದು ಹೇಳಿದರು.

ದೇವದಾಸಿ ಮಹಿಳೆಯರಲ್ಲಿ ಹಲವರಿಗೆ ಆಧಾರ್ ಕಾರ್ಡ್, ಪಡಿತರ ಚೀಟಿ, ಅಥವಾ ಸರ್ಕಾರದ ಯೋಜನೆಗಳ ಸೌಲಭ್ಯಗಳಿಲ್ಲ. ಕೆಲವರಿಗೆ ಚಾಲನಾ ಪರವಾನಗಿ ಕೂಡ ಇಲ್ಲ. ಕಾನೂನು ಜ್ಞಾನ ಕೊರತೆಯಿಂದಾಗಿ ಅವರು ಹಲವಾರು ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಆದ್ದರಿಂದ ನಾವು ಅವರ ಬಳಿಗೆ ತೆರಳಿ ಅವರ ಸಮಸ್ಯೆಗಳಿಗೆ ಸ್ಪಂದಿಸಲು ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದು ವಿವರಿಸಿದರು.

ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ದೇವದಾಸಿ ಮಹಿಳೆಯರು ಸೇರಿದಂತೆ ಇತರೆ ಮಹಿಳೆಯರಿಗೂ ಮೆಗಾ ಹೆಲ್ತ್ ಕ್ಯಾಂಪ್ ಹಮ್ಮಿಕೊಳ್ಳಲಾಗಿದೆ. ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ಮತ್ತು ಸರ್ಕಾರಿ ಯೋಜನೆಗಳ ಅರಿವು ನೀಡಲು ಸ್ಥಳದಲ್ಲೇ ಮಾಹಿತಿ ಸ್ಟಾಲ್‌ಗಳನ್ನು ಅಳವಡಿಸಲಾಗುವುದು. ಮಹಿಳೆಯರ ಆರೋಗ್ಯ ತಪಾಸಣೆ ನಡೆಯಲಿದ್ದು, ದೇವದಾಸಿಯರಿಗೆ ಲಭ್ಯವಿರುವ ಸರ್ಕಾರಿ ಸೌಲಭ್ಯಗಳ ಕುರಿತು ಉಪನ್ಯಾಸವೂ ಇರಲಿದೆ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಹಾಜರಾಗುವ ದೇವದಾಸಿ ಮಹಿಳೆಯರಿಗೆ ಸಾರಿಗೆ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ.

ಅಂದು ಕಾರ್ಯಕ್ರಮವನ್ನು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಉದ್ಘಾಟಿಸಲಿದ್ದಾರೆ. ಹೈಕೋರ್ಟ್‌ನ ನ್ಯಾಯಾಧೀಶರು, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಪಾಲಕ ಅಧ್ಯಕ್ಷರು, ರಾಯಚೂರು ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರು, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು, ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಬಾರ್ ಅಸೋಸಿಯೇಶನ್ ಅಧ್ಯಕ್ಷರು ಸೇರಿದಂತೆ ಗಣ್ಯರು ಭಾಗಿಯಾಗಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಾರುತಿ ಶಿ. ಬಾಗಡೆ, ಹಿರಿಯ ಶ್ರೇಣಿ ದಿವಾನಿ ನ್ಯಾಯಾಧೀಶ ಎಚ್.ಎ.ಸಾತ್ವಿಕ್, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ನಲವಾಡೆ, ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಾಲಸುಬ್ರಮಣ್ಯ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News