ಲಿಂಗಸುಗೂರು | ವಿದ್ಯಾರ್ಥಿಗಳನ್ನು ನಿಂದಿಸಿದ ಡಿಪೋ ಕಂಟ್ರೋಲ್ ಮ್ಯಾನೇಜರ್ ; ಆರೋಪ
ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು
ರಾಯಚೂರು: ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ಡಿಪೋ ಕಂಟ್ರೋಲ್ ಮ್ಯಾನೇಜರ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಶಾಲಾ ಕಾಲೇಜು ವಿದ್ಯಾರ್ಥಿಗಳು ಮಂಗಳವಾರ ಸಂಜೆ ಪ್ರತಿಭಟನೆ ನಡೆಸಿದರು.
ಸೋಮವಾರ ಬಸ್ ಸಮಯ ಕೇಳಲು ಹೋದ ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದರಿಂದ ಮನನೊಂದ ವಿದ್ಯಾರ್ಥಿಗಳು ಮಂಗಳವಾರ ತರಗತಿ ಮುಗಿದ ಬಳಿಕ ಹೊಸ ಬಸ್ ನಿಲ್ದಾಣದಲ್ಲಿ ಸೇರಿ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಗೆ ವಿವಿಧ ಸಂಘಟನೆಗಳ ಮುಖಂಡರು ಸಾಥ್ ನೀಡಿದರು. ನೂರಾರು ಕಾಲೇಜು ವಿದ್ಯಾರ್ಥಿಗಳು ಸೇರಿದ್ದರಿಂದ ಹಟ್ಟಿಯಲ್ಲಿ ಉದ್ವಿಗ್ನತೆ ಸೃಷ್ಟಿಯಾಯಿತು.
ಪಟ್ಟಣಕ್ಕೆ ಹತ್ತಿರದ ಹಳ್ಳಿ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಮಾತ್ರ ಬಸ್ ಸೌಲಭ್ಯ ಇರುವುದರಿಂದ, ಸಂಜೆ ಊರಿಗೆ ಹಿಂತಿರುಗಲು ಗಂಟೆಗಳ ಕಾಲ ಕಾಯುವ ದುಸ್ಥಿತಿ ಮುಂದುವರಿದಿದೆ. ಈ ನಡೆಗೆ ಆಕ್ರೋಶಗೊಂಡ ವಿದ್ಯಾರ್ಥಿಗಳು, "ಅವರ ವಿರುದ್ದ ತಕ್ಷಣ ಕಾನೂನು ಕ್ರಮ ತೆಗೆದು, ಕೆಲಸದಿಂದ ವಜಾ ಮಾಡಬೇಕು. ಇಲ್ಲದಿದ್ದರೆ ಧರಣಿ ಮುಂದುವರೆಯುತ್ತದೆ,'' ಎಂದು ಎಚ್ಚರಿಕೆ ನೀಡಿದರು.
ವಿದ್ಯಾರ್ಥಿಗಳ ಹೋರಾಟದ ತೀವ್ರತೆ ಅರಿತು ಡಿಪೋ ಮ್ಯಾನೇಜರ್ ಸ್ಥಳಕ್ಕಾಗಮಿಸಿ ಹಳ್ಳಿ ಪ್ರದೇಶಗಳಿಗೆ ತಕ್ಷಣ ಬಸ್ ಸೌಲಭ್ಯ ಒದಗಿಸಿ, ಮುಂದುವರೆದು ಪ್ರತಿದಿನ ವಿದ್ಯಾರ್ಥಿಗಳಿಗಾಗಿ ಬಸ್ ವ್ಯವಸ್ಥೆ ಮಾಡುವ ಭರವಸೆ ನೀಡಿದರು.
ಈ ಪ್ರತಿಭಟನೆಯ ವೇಳೆ ಪೊಲೀಸ್ ಇಲಾಖೆ ಸ್ಥಳದಲ್ಲಿರಲಿಲ್ಲ ಎಂಬ ಆರೋಪ ಕೇಳಿ ಬಂದಿದ್ದು, ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.
ವಿವಿಧ ಸಂಘಟನೆಗಳ ಹೋರಾಟಗಾರರಾದ ವಿನೋದ್ ಕುಮಾರ್ ಸುರೇಶ್ ಗುರಿಕಾರ, ರಮೇಶ್ ವೀರಾಪುರ, ನಿಂಗಪ್ಪ, ಲಾಲ್ ಫೀರ್, ವೆಂಕಟೇಶ್ ಗಿರಿ ಸೇರಿದಂತೆ ಹಲವು ಸಂಘಟನಾ ಮುಖಂಡರು ಭಾಗವಹಿಸಿದ್ದರು.