×
Ad

ರಾಯಚೂರು | ಫೆ.5ರಂದು ಏಮ್ಸ್ ಗಾಗಿ ಬೃಹತ್ ಹೋರಾಟ ; ಬಸವರಾಜ ಕಳಸ

Update: 2025-02-03 20:43 IST

ರಾಯಚೂರು : ರಾಯಚೂರು ಏಮ್ಸ್ ಹೋರಾಟ ಸಮಿತಿಯಿಂದ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಫೆ.5ರಂದು 1,000ದಿನ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ನಗರದ ಕರ್ನಾಟಕ ಸಂಘದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಬಸವರಾಜ ಕಳಸ ತಿಳಿಸಿದರು.

ಅವರಿಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ, ಮಹತ್ವಾಕಾಂಕ್ಷೆ ಜಿಲ್ಲೆಯಾದ, ಐಐಟಿ ತಪ್ಪಿದ ರಾಯಚೂರು ಜಿಲ್ಲೆಗೆ ಏಮ್ಸ್ ಆರೋಗ್ಯ ಸಂಸ್ಥೆ ನೀಡಬೇಕು ಎಂದು ವಿವಿಧ ಹಂತಗಳಲ್ಲಿ ಹೋರಾಟ ಮಾಡಿದ್ದು, ಕಳೆದ 998 ದಿನಗಳಿಂದ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದೇವೆ. ನಮ್ಮಹೋರಾಟಕ್ಕೆ ಸ್ಪಂದಿಸಿ ರಾಜ್ಯ ಸರ್ಕಾರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ 5 ಬಾರಿ ಪತ್ರ ಬರೆದಿದ್ದಾರೆ.

ಆದರೆ ಯಾವುದೇ ಸ್ಪಂದನೆ ನೀಡದ ಪ್ರಧಾನಮಂತ್ರಿ, ಗೃಹ ಮಂತ್ರಿ ಈಚೆಗೆ ಕೇಂದ್ರ ಸಚಿವ ಜೆ.ಪಿ ನಡ್ಡಾ ರಾಯಚೂರು ಜಿಲ್ಲೆಗೆ ರಾಷ್ಟ್ರೀಯ ಆರೋಗ್ಯ ಯೋಜನೆಯಡಿಯಲ್ಲಿ ಆರೋಗ್ಯ ಸೇವೆಗಳನ್ನು ಮೇಲ್ದರ್ಜೆಗೇರಿಸಿ ವಿಶೇಷ ಸ್ಥಾನಮಾನ ನೀಡಲಾಗುವುದು ಎಂದು ಅವರು ಮುಖ್ಯಮಂತ್ರಿಯವರ ಪತ್ರಕ್ಕೆ ಉತ್ತರಿಸಿದ್ದು, ಕಣ್ಣೊರೆಸುವ ತಂತ್ರವಾಗಿದೆ ಎಂದು ದೂರಿದರು.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಷಿ, ರಾಜ್ಯ ಸಚಿವರಾದ ಸೋಮಣ್ಣ, ಶೋಭಾ ಕರಂದ್ಲಾಜೆ ಹೋರಾಟಗಾರರ ಮನವಿಗೆ ಸ್ದಂದಿಸಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಶಾಸಕ ಡಾ.ಶಿವರಾಜ ಪಾಟೀಲ ಜಿಲ್ಲೆಯ ಜನರ ಧ್ವನಿಯಾಗಿ ಕೇಂದ್ರದ ಮೇಲೆ ಒತ್ತಡ ಹೇರಲಿಲ್ಲ ಎಂದು ಕಿಡಿಕಾರಿದರು.

ಈಗಲೂ ಕಾಲ ಮಿಂಚಿಲ್ಲ ಶಾಸಕ ಡಾ.ಶಿವರಾಜ ಪಾಟೀಲ್, ವಿಜಯೇಂದ್ರ ನಮ್ಮ ಹೋರಾಟಕ್ಕೆ ಬೆಂಬಲಿಸಿ ಪ್ರಧಾನ ಮೋದಿಯ ಬಳಿ ನಿಯೋಗ ಕರೆದುಕೊಂಡು ಹೋಗಿ ಬದ್ಧತೆ ಪ್ರದರ್ಶಿಸಲಿ ಎಂದು ಒತ್ತಾಯಿಸಿದರು.

ಫೆ.5 ರಂದು ಜಿಲ್ಲೆಯಾದ್ಯಂತ ಎಲ್ಲಾ ತಾಲೂಕುಗಳಲ್ಲಿ ಹೋರಾಟ ನಡೆಯಲಿದೆ. ರಾಯಚೂರಿನಲ್ಲಿ ನಡೆಯುವ ಹೋರಾಟಕ್ಕೆ ಕಲ್ಯಾಣ ಕರ್ನಾಟಕದ ಹೋರಾಟಗಾರ ಲಕ್ಷ್ಮಣ ದಸ್ತಿ, ಕಲಬುರಗಿಯ ಶರಣಬಸ್ಸಪ್ಪ ಅಪ್ಪ ಶಿಕ್ಷಣ ಸಂಸ್ಥೆಯ ಬಸವರಾಜ , ಹೋರಾಟಗಾರ ಆರ್ ಕೆ ಹುಡಗಿ ಸೇರಿದಂತೆ ಜಿಲ್ಲೆಯ ವಿವಿಧ ಕನ್ನಡ ಪರ , ದಲಿತ,ಪ್ರಗತಿಪರ ಸಂಘಟನೆಗಳು ಹಾಗೂ ಶಿಕ್ಷಣ ಸಂಸ್ಥೆಗಳ ಮುಖಂಡರು, ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಸಹ ಸಂಚಾಲಕ ಅಶೋಕ ಕುಮಾರ ಜೈನ್, ಜಾನ್ ವೆಸ್ಲಿ, ವಿನಯ ಕುಮಾರ ಚಿತ್ರಕಾರ, ಎಂ.ಆರ್ ಬೇರಿ ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News