ರಾಯಚೂರು: ಜೋಳದ ರಾಶಿಗೆ ದುಷ್ಕರ್ಮಿಗಳಿಂದ ಬೆಂಕಿ: 15 ಲಕ್ಷ ರೂ. ಬೆಳೆಹಾನಿ
ರಾಯಚೂರು: ಕೊಯ್ಲು ಮಾಡಿ ಜಮೀನಿನಲ್ಲಿ ಶೇಖರಿಸಿಟ್ಟಿದ್ದ ಜೋಳದ ರಾಶಿ ಹಾಗೂ ಸಪ್ಪೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾದ ಘಟನೆ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.
ಕಪಗಲ್ ಗ್ರಾಮದ ಎನ್.ರಾಶೇಖರ್ ಗೌಡ ಕಪಗಲ್ ಎಂಬ ರೈತರಿಗೆ ಸೇರಿದ 6.5 ಎಕರೆ ಜಮೀನಿನಲ್ಲಿ ಬೆಳೆಯಲಾಗಿದ್ದ ಜೋಳದ ರಾಶಿ ಹಾಗೂ ಸಪ್ಪೆಗೆ ಬೆಂಕಿ ಹಚ್ಚಲಾಗಿದೆ. ಇದರಿಂದ ಸುಮಾರು 15 ಲಕ್ಷ ರೂ. ಮೌಲ್ಯದ ಜೋಳದ ತೆನೆಗಳು ಹಾಗೂ ದನಗಳು ತಿನ್ನುವ ಸಪ್ಪೆ ಸುಟ್ಟು ಭಸ್ಮವಾಗಿವೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡರು.
ಗ್ರಾಮ ಲೆಕ್ಕಾಧಿಕಾರಿ ಮೌನೇಶ ಘಟನಾ ಸ್ಥಳಕ್ಕೆ ಭೇಟಿ ನೀಡಿ ವರದಿ ಪಡೆದು ಪರಿಶೀಲನೆ ನಡೆಸಿದರು.
ಒತ್ತಾಯ: ಜೋಳದ ರಾಶಿಗೆ ಬೆಂಕಿ ಹಚ್ಚಿದ ಕುರಿತು ತನಿಖೆ ನಡೆಸಿ ತಪ್ಪಿತಸ್ಥರರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಜೊತೆಗೆ ನಷ್ಟಕ್ಕೆ ಒಳಗಾದ ರೈತ ಎನ್ ರಾಜಶೇಖರ್ ಗೌಡರಿಗೆ ಸರ್ಕಾರದಿಂದ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.