ರಾಯಚೂರು | ಜೆಡಿಎಸ್ ಶಾಸಕಿಯ ಮನೆಗೆ ನುಗ್ಗಲು ಯತ್ನಿಸಿದ ದುಷ್ಕರ್ಮಿಗಳು ; ದೂರು ದಾಖಲು
ಶಾಸಕಿ ಕರೆಮ್ಮಾ ಜಿ.ನಾಯಕ್
ರಾಯಚೂರು : ಜಿಲ್ಲೆಯ ದೇವದುರ್ಗ ಕ್ಷೇತ್ರದ ಜೆಡಿಎಸ್ ಶಾಸಕಿ ಕರೆಮ್ಮಾ ಜಿ.ನಾಯಕ್ ಅವರ ಮನೆಗೆ ದುಷ್ಕರ್ಮಿಗಳು ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ದೇವದುರ್ಗ ಪಟ್ಟಣದಲ್ಲಿರುವ ಅವರ ಮನೆಯ ಹಿಂಬಾಗಿಲಿನಿಂದ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಮನೆಯ ಪಕ್ಕದ ನಿವಾಸಿಗಳು ಕೂಗಿಕೊಂಡ ಪರಿಣಾಮ ಸ್ಥಳದಿಂದ ಕಲ್ಕಿತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಶಾಸಕಿ ಕರೆಮ್ಮಾ ಜಿ.ನಾಯಕ್ ಮಾಧ್ಯಮಗಳೊಂದಿಗೆ ಮಾತನಾಡಿ, ನನ್ನ ಮನೆಯಲ್ಲಿ ಕಳ್ಳತನ ಮಾಡೊಕೆ ಏನು ಇಲ್ಲ. ಈ ಘಟನೆ ನಡೆದಿದ್ದು ನೆನೆಸಿಕೊಂಡರೆ ಚಿಂತೆಯಾಗುತ್ತೆ. ಮನೆಯ ಹಿಂಬದಿಯಿಂದ ಬಂದ ದುಷ್ಕರ್ಮಿಗಳು ಕಿಟಕಿಯಿಂದ ಇಣುಕಿ ನೋಡಿದ್ದಾರೆ. ನಾನು ಮನೆಯಲ್ಲಿ ಮಲಗಿದ್ದೆ. ಈ ವೇಳೆ ಮೂವರು ಕಿಟಕಿಯಿಂದ ಇಣುಕಿ ನೋಡಿದ್ದಾರೆ ಎಂದು ಅಕ್ಕಪಕ್ಕದವರು ಹೇಳಿದ್ದಾರೆ. ದೇವದುರ್ಗ ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದರು.
ಅವರು ಕಳ್ಳತನಕ್ಕೇ ಬಂದಿದ್ದರೊ ಅಥವಾ ಇನ್ಯಾವುದಕ್ಕೆ ಬಂದಿದ್ದರೊ ನನಗೆ ಗೊತ್ತಿಲ್ಲ. ನಾನು ಮಲಗಿದ್ದ ಸ್ಥಳಕ್ಕೆ ಅವರು ಬಂದಿದ್ದಾರೆ. ಕಿಟಕಿಯಿಂದ ನನಗೆ ನಿದ್ದೆ ಬರುವ ಹಾಗೆ ಅವರು ಏನೋ ಮಾಡಿದ್ದಾರೆ. ಸ್ವಲ್ಪ ಶಬ್ಧವಾದರೂ ನಾನು ಎಚ್ಚರವಾಗುತ್ತೇನೆ, ಆದರೆ ಆವತ್ತು ನನಗೆ ಎಚ್ಚರವಾಗಿಲ್ಲ. ಮರುದಿನ ನನಗೂ ಮೈಕೈ ಭಾರ ಆಗಿ, ಬಹಳ ಸುಸ್ತು ಆಗಿತ್ತು. ಹೀಗೇಕೆ ಆಯ್ತು ಅನ್ನುವುದು ನನಗೂ ಸಹ ಅನುಮಾನ ಇದೆ. ಇದೆಲ್ಲಾ ನೋಡಿದರೆ ಅವರು ಕಳ್ಳತನಕ್ಕೆ ಬಂದಿಲ್ಲ ಎಂದು ಅನ್ನಿಸುತ್ತೆ. ಆದರೆ ನಾನು ಯಾವುದಕ್ಕೂ ಹೆದರುವುದಿಲ್ಲ ಎಂದು ತಿಳಿಸಿದ್ದಾರೆ.
ಕಳ್ಳತನದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಆರೋಪಿಗಳನ್ನು ಇನ್ನೂ ಪತ್ತೆ ಹಚ್ಚಿಲ್ಲ. ಶಾಸಕಿ ಮನೆಯ ಮೇಲೆ ದಾಳಿ ನಡೆಸಿದ್ದಾರೆ ಎಂದರೆ ಸಾಮಾನ್ಯ ಜನರ ಪರಿಸ್ಥಿತಿ ಹೇಗೆ ಎಂದು ಶಾಸಕಿಯ ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಪೊಲೀಸರ ನಿರ್ಲಕ್ಷ್ಯತನದಿಂದ ಕಳ್ಳತನ, ದರೋಡೆ, ಸುಲಿಗೆ, ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಶಾಸಕಿಯ ಪುತ್ರಿ ಗೌರಿ ಪ್ರತಿಕ್ರಿಯಿಸಿದ್ದಾರೆ.