×
Ad

ರಾಯಚೂರು | ಪ್ರವಾಹದ ವೇಳೆ ರಕ್ಷಣಾ ಕಾರ್ಯದ ಅಣಕು ಪ್ರದರ್ಶನ

Update: 2025-11-05 17:39 IST

ರಾಯಚೂರು: ಪ್ರವಾಹ ಸಂದರ್ಭದಲ್ಲಿ ಜನರ ರಕ್ಷಣೆಗಾಗಿ ಕೈಗೊಳ್ಳಬೇಕಾಗಿರುವ ಮುನ್ನೆಚ್ಚರಿಕೆ ಕ್ರಮಗಳು, ವಿಪತ್ತು ನಿರ್ವಹಣೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ನಗರದ ಕೃಷ್ಣಗಿರಿಯ ಚೇತನ್ ಟೆಕ್ನೋ ಶಾಲೆಯ ಪಕ್ಕದ ಕೆರೆಯಲ್ಲಿ ಬುಧವಾರ ಅಣಕು ಪ್ರದರ್ಶನ ನಡೆಸಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಅಗ್ನಿಶಾಮಕದಳ, ಗೃಹರಕ್ಷಕ ದಳ ಹಾಗೂ ಪೊಲೀಸ್ ಇಲಾಖೆ ಸಹಯೋಗದಿಂದ ನಡೆದ ಅಣಕು ಪ್ರದರ್ಶನದಲ್ಲಿ, ವಿಪತ್ತು ಅಪಾಯಕ್ಕೆ ಸಿಲುಕಿರುವ ಜನರ ರಕ್ಷಣೆ ಮಾಡುವ ಕಾರ್ಯಾಚರಣೆಯ ಪ್ರಾತ್ಯಕ್ಷಿಕೆ ನಡೆಸಲಾಯಿತು.

ನದಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸಿ ನದಿಯಿಂದ ಹೊರ ತಂದು ಪ್ರಥಮ ಚಿಕಿತ್ಸೆ ನೀಡುವುದು ಮತ್ತು ಅಲ್ಲಿಂದ ಆಸ್ಪತ್ರೆಗೆ ಕಳುಹಿಸುವ ಸನ್ನಿವೇಶ ಪ್ರದರ್ಶಿಸಲಾಯಿತು. ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿ ವ್ಯಕ್ತಿ ಮುಳುಗುತ್ತಿರುವ ಸಮಯದಲ್ಲಿ ಅಗ್ನಿಶಾಮಕ ಸಿಬ್ಬಂದಿ ದೋಣಿಯಲ್ಲಿ ರಕ್ಷಣೆ ಮಾಡುವ ಪ್ರಾತ್ಯಕ್ಷಿಕೆ ಎಲ್ಲರ ಗಮನ ಸೆಳೆಯಿತು.

ಈ ವೇಳೆ ರಾಯಚೂರು ತಹಶೀಲ್ದಾರ್ ಸುರೇಶ್ ವರ್ಮ ಅವರು ಮಾತನಾಡಿ, ಪ್ರವಾಹ ಪರಿಸ್ಥಿತಿ ಉಂಟಾದಲ್ಲಿ ನಿರ್ವಹಣೆಗೆ ಎಲ್ಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದೆ. ಎಲ್ಲ ರೀತಿಯಿಂದ ಜಿಲ್ಲಾಡಳಿತ ಸನ್ನದ್ಧವಾಗಿದ್ದು, ಪೊಲೀಸ್ ಹಾಗೂ ಅಗ್ನಿಶಾಮಕ ದಳ ಕಾರ್ಯಾಚರಣೆ ಸಜ್ಜುಗೊಂಡಿದ್ದಾರೆ. ಜನರು ಪ್ರವಾಹ ಪರಿಸ್ಥಿತಿಯಲ್ಲಿ ನೀರಿಗೆ ಇಳಿಯುವುದು, ನೀರಿನ ಜೊತೆ ದುಸ್ಸಾಹಸಕ್ಕೆ ಕೈಹಾಕುವುದು ಮಾಡಬಾರದು. ಜಿಲ್ಲಾಡಳಿತಕ್ಕೆ ಸ್ಪಂದಿಸುವ ಕಾರ್ಯವಾಗಬೇಕು ಎಂದರು.

ಜಿಲ್ಲೆಯಲ್ಲಿ ಕೃಷ್ಣಾ, ತುಂಗಭದ್ರಾ ಹಾಗೂ ಭೀಮಾ ನದಿ ಪಾತ್ರದಲ್ಲಿ ಪ್ರವಾಹ ಉಂಟಾದಾಗ, ರಕ್ಷಣಾ ಕಾರ್ಯಾಚರಣೆ ಹೇಗಿರಬೇಕು ಎಂಬುದರ ಬಗ್ಗೆ ಅಣಕು ಪ್ರದರ್ಶನ ನಡೆಸಲಾಗುತ್ತಿದೆ. ಎಲ್ಲೆಲ್ಲಿ ಪ್ರವಾಹ ಉಂಟಾಗುತ್ತದೆ. ಎಷ್ಟು ಸೇತುವೆಗಳು ಮುಳುಗಡೆಯಾಗುತ್ತವೆ ಎಂಬುದನ್ನು ಗುರುತಿಸಿಕೊಂಡು ಆ ವ್ಯಾಪ್ತಿಯ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಪ್ರವಾಹ ನಿರ್ವಹಣೆಗೆ ಮುಂಜಾಗ್ರತವಾಗಿ ಜಿಲ್ಲಾಡಳಿತ ಜಾಗೃತಿ ಮೂಡಿಸುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎನ್.ಡಿ.ಆರ್.ಎಫ್ ಉಪ ಕಮಾಂಡರ್ ಅಕಿಲೇಶ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಭಾರಿ ಅಧಿಕಾರಿ ಡಾ.ಗಣೇಶ್, ರಾಯಚೂರು ಕ್ಷೇತ್ರ ಶಿಕ್ಷಣಾಧಿಕಾರಿ ಈರಣ್ಣ ಕೋಸಗಿ, ಡಿ.ಆರ್.ಎಫ್ ರವೀಂದ್ರ ಭಟ್ಟ, ರಾಯಚೂರು ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಜ್ವಲ್, ಚೇತನ್ ಟೆಕ್ನೋ ಶಾಲೆಯ ಪ್ರಾಂಶುಪಾಲರಾದ ಕೆ.ಶ್ರೀರಕ್ಷ, ಜಿಲ್ಲಾಡಳಿತದ ವಿಪತ್ತು ನಿರ್ವಹಣಾ ಪರಿಣಿತರಾದ ಅನೀಲ್ ಕುಮಾರ್ ಕುಲಕರ್ಣಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News