ರಾಯಚೂರು: ಕ್ಷುಲ್ಲಕ ಕಾರಣಕ್ಕೆ ಪಾನಿಪುರಿ ವ್ಯಾಪಾರಿಗೆ ಚೂರಿ ಇರಿತ
ಸಾಂದರ್ಭಿಕ ಚಿತ್ರ
ರಾಯಚೂರು: ರಾಯಚೂರು ತಾಕೂಕಿನ ಶಕ್ತಿನಗರದಲ್ಲಿ ವ್ಯಕ್ತಿಯೊಬ್ಬ ಕ್ಷುಲ್ಲಕ ಕಾರಣಕ್ಕೆ ಪಾನಿಪುರಿ ವ್ಯಾಪಾರಿಗೆ ಚೂರಿ ಇರಿದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಗಂಭೀರವಾಗಿ ಗಾಯಗೊಂಡ ವ್ಯಾಪಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಜಸ್ಥಾನದ ಚಿತ್ತೋಡಗಡ್ ಮೂಲದ ಪಾನಿಪುರಿ ವ್ಯಾಪಾರಿ ದೇವಿಲಾಲ್ (22 ) ಗಾಯಗೊಂಡ ಯುವಕ.
ಶುಕ್ರವಾರ ಸಂಜೆ ಶಕ್ತಿನಗರದ 2ನೇ ಕ್ರಾಸ್ ನಲ್ಲಿರುವ ಸಾವರಿಯಾ ಚಾಟ್ ಸೆಂಟರ್ ನಲ್ಲಿ ಪಾನಿಪುರಿ ವ್ಯಾಪಾರಿ ಮಾಡುತ್ತಿದ್ದಾಗ ಮೀರಾಪುರ ಗ್ರಾಮದ ಬೀರಲಿಂಗ ಎಂಬಾತ ಬಂದು ʼಡ್ರೈ ಪಾಪಡ್ʼ ಆರ್ಡರ್ ಮಾಡಿದ್ದಾನೆ. ಡ್ರೈ ಪಾಪಡ್ ಕೊಟ್ಟಾಗ ತಣ್ಣಗಿದೆ ಬಿಸಿ ಮಾಡಿ ಕೊಡುವಂತೆ ಹೇಳಿದ್ದಾನೆ, ಇದಕ್ಕೆ ಪ್ರತಿಯಾಗಿ ದೆವಿಲಾಲ್ ನೀನು ಹೇಳಿದ್ದನ್ನೇ ಕೊಟ್ಟಿದ್ದೇನೆ ಎಂದು ಹೇಳಿದಾಗ ಬೀರಲಿಂಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಗಾಯಗೊಂಡ ದೇವಿಲಾಲ್ ನ ಸಹೋದರ ರಾಜು ನೀಡಿದ ದೂರಿನ ಮೇರೆಗೆ ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.