ರಾಯಚೂರು | ‘ಸಂವಿಧಾನ ರಕ್ಷಿಸಿ, ಗಣತಂತ್ರ ಬಲಗೊಳಿಸಿ’ : ನಾಗರಾಜ್ ಪೂಜಾರ್ ಸಲಹೆ
ರಾಯಚೂರು : ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ಒದಗಿಸುವುದನ್ನು ಖಚಿತಪಡಿಸುತ್ತದೆ. ಸಂವಿಧಾನದ ಮೌಲ್ಯಗಳನ್ನು ಉಳಿಸಲು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಸಿಪಿಐಎಂಎಲ್ ಲಿಬರೇಶನ್ ಜಿಲ್ಲಾ ಕಾರ್ಯದರ್ಶಿ ನಾಗರಾಜ್ ಪೂಜಾರ್ ತಿಳಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಇಂದಿನ ಪರಿಸ್ಥಿತಿಯಲ್ಲಿ ಸಂವಿಧಾನದ ಆಶಯಕ್ಕೆ ಧಕ್ಕೆಯಾಗುತ್ತಿದ್ದು, ಈ ಮೌಲ್ಯಗಳ ಮೇಲೆ ದಾಳಿ ನಡೆಯುತ್ತಿದ್ದು, ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಲು ಮತ್ತು ದಾಳಿಗಳನ್ನು ತಡೆಯಲು ಹೋರಾಟ ಮಾಡುವುದು ಅಗತ್ಯವಾಗಿದೆ. ಭಾರತದ ಗಣತಂತ್ರ 75ನೇ ವಾರ್ಷಿಕೋತ್ಸವ ನಿಮಿತ್ಯ ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸಬೇಕಿದೆ ಎಂದರು.
ಸಂವಿಧಾನವನ್ನು ಅಪಮಾನಗೊಳಿಸುವುದು, ನಮ್ಮ ದೇಶದ ಅಸ್ತಿತ್ವ ಮತ್ತು ಐಕ್ಯತೆಯನ್ನು ಕಂಠಿತಗೊಳಿಸುವ ಅಪಾಯಕ್ಕೆ ಒಳಪಡಿಸುತ್ತದೆ ಎಂಬುದನ್ನು ನಾವು ಸದಾ ನೆನಪಿನಲ್ಲಿಡಬೇಕು. ನಮ್ಮ ದೇಶಕ್ಕೆ ಪರಸ್ಪರವಾಗಿ, ಸಂವಿಧಾನದ ಪೀಠಿಕೆಯಲ್ಲಿರುವ ಸಾರ್ವಭೌಮ, ಸಾಮಾಜಿಕ, ಜಾತ್ಯತೀತ ಹಾಗೂ ಪ್ರಜಾಪ್ರಭುತ್ವ ಗಣರಾಜ್ಯವಾಗಿ ನಮಗೆ ನಾವೇ ಮಾಡಿಕೊಂಡಿರುವ ಪ್ರತಿಜ್ಞೆಯನ್ನು ಸಾಕಾರಗೊಳಿಸುವ ಜವಾಬ್ದಾರಿ ನಮ್ಮ ಮೇಲೆಯಿದೆ ಎಂದರು.
ನಿಮ್ಮ ಕೆಲಸದ ಸ್ಥಳಗಳಲ್ಲಿ ಮತ್ತು ವಾಸಸ್ಥಳಗಳಲ್ಲಿ ಸಂವಿಧಾನ ಪೀಠಿಕೆಯ ಫಲಕವನ್ನು ಸ್ಥಾಪಿಸಬೇಕು. ತ್ರಿವರ್ಣ ಧ್ವಜದ ಜಾಥಾ ಆಯೋಜಿಸಿ, ಸಂವಿಧಾನವನ್ನು ಎತ್ತಿಹಿಡಿಯಲು ಸಾಮೂಹಿಕ ಪ್ರತಿಜ್ಞೆ ಮಾಡಬೇಕು ಎಂದು ಹೇಳಿದರು.
ಸಂವಿಧಾನ ಪೀಠಿಕೆಯನ್ನು ಸಾಮೂಹಿಕವಾಗಿ ಓದಲು ಕಾರ್ಯಕ್ರಮ ಆಯೋಜಿಸಬೇಕು. ಸ್ವಾತಂತ್ರ್ಯ, ಸಮಾನತೆ ಮತ್ತು ಬಂಧುತ್ವದ ಆಶಯಗಳನ್ನು ಪ್ರಚಾರ ಮಾಡಬೇಕು ಎಂದು ಪಕ್ಷದ ಮುಖಂಡರಿಗೆ ಹಾಗೂ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.