ರಾಯಚೂರು | ಸಚಿವ ಎಚ್.ಸಿ.ಮಹಾದೇವಪ್ಪರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲು ಆಗ್ರಹಿಸಿ ಪ್ರತಿಭಟನೆ
ರಾಯಚೂರು : ಪರಿಶಿಷ್ಠ ಜಾತಿಗಳ ಬ್ಯಾಕ್‌ಲಾಗ್, ಸಾಮಾನ್ಯ ಹುದ್ದೆಗಳ ನೇಮಕಾತಿಗಳ ಬಗ್ಗೆ ಅಸಂಬದ್ಧ ಹೇಳಿಕೆ ನೀಡುತ್ತಿರುವ ಸಚಿವ ಎಚ್.ಸಿ.ಮಹಾದೇವಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ ಎಂದು ಒತ್ತಾಯಿಸಿ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯಿಂದ ಇಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ನ್ಯಾ.ನಾಗಮೋಹನ್‌ದಾಸ್ ಸಮಿತಿಯ ಆಯೋಗದ ಕಾರ್ಯಕ್ಕೆ ಹಿನ್ನಡೆಯಾಗುವಂತೆ ಮಾಡಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಎಸ್.ಸಿ.ಪಿ. ಅನುದಾನ ದುರ್ಬಳಕೆಗೆ ಕಾರಣರಾದ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹಾದೇವಪ್ಪ ಅವರನ್ನು ಸಚಿವ ಸ್ಥಾನ ಕೂಡಲೇ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
2024ರ ಆ.1ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಂತೆ ಮತ್ತು ಪರಿಶಿಷ್ಟ ಜಾತಿಗಳ ಒಳಮೀಸಲಾತಿ, ಮಾದಿಗ ಸಂಘಟನೆಗಳ ನಿರಂತರ ಒತ್ತಡದಿಂದ, 4 ತಿಂಗಳ ತಡವಾಗಿ ವಲ್ಲದ ಮನಸ್ಸಿನಿಂದ, ಅನಿವಾರ್ಯವಾಗಿ 2024ರ ನ.12ರಂದು ನ್ಯಾ.ನಾಗಮೋಹನದಾಸ್ ಏಕಸದಸ್ಯ ಪೀಠ ರಚನೆ ಮಾಡಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ಸಂಬಂಧಿಸಿ ವಿಚಾರಣೆ ಮಾಡಿ ಶಿಫಾರಸ್ಸು ನೀಡಲು ತಮ್ಮ ಸರ್ಕಾರ ಆದೇಶ ನೀಡಿತು. ಆದರೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರೊಇ ಮಾಡದೇ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸರ್ಕಾರ ಮುಂದಾಗಿರುವುದು ಖಂಡನೀಯ ಎಂದು ದೂರಿದರು.
ಕೂಡಲೇ ಪರಿಶಿಷ್ಟ ಜಾತಿಗಳ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ, ನ್ಯಾ.ನಾಗಮೋಹನ್‌ದಾಸ್ ಆಯೋಗಕ್ಕೆ ಅಸಹಕಾರ ನೀಡಿದ ಅಧಿಕಾರಿಗಳೊಂದಿಗೆ ಮತ್ತು ಪರಿಶಿಷ್ಟ ಜಾತಿ, ಪಂಗಡ ಉಪಯೋಜನೆ ಹಣ ದುರ್ಬಳಕೆ ಕೃತ್ಯದಲ್ಲಿ ಶಾಮೀಲಾಗಿರುವ ಎಚ್.ಸಿ.ಮಹಾದೇವಪ್ಪ ನವರನ್ನು ಕೂಡಲೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು.
ನ್ಯಾ.ನಾಗಮೋಹನ್‌ದಾಸ್ ಆಯೋಗಕ್ಕೆ ಅವಶ್ಯ ಮಾಹಿತಿ ನೀಡದೇ ಅಸಹಕಾರ, ನಿರ್ಲಕ್ಷ್ಯ ವಹಿಸಿದ ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಕೂಡಲೇ ಅಮಾನತ್ತುಗೊಳಿಸಬೇಕು. ಪರಿಶಿಷ್ಟ ಜಾತಿಗಳ ಉಪ ಯೋಜನೆ ಹಣ ದುರ್ಬಳಕೆ ತಡೆಯಲು ಕಲಂ 7ಬಿ, 7ಸಿ ಗಳನ್ನು ರದ್ದುಗೊಳಿಸಬೇಕು. ಆದಿ ಕರ್ನಾಟಕ, ಆದಿ ದ್ರಾವೀಡ, ಆದಿ ಆಂಧ್ರ ಜಾತಿಗಳಿಗೆ ಹೊಲೆಯ, ಮಾದಿಗ ಎಂದು ನಿಖರ ಜನಸಂಖ್ಯೆ ಸಮೀಕ್ಷೆಗೆ ಕ್ರಮ ಕೈಗೊಳ್ಳಬೇಕು. ಪರಿಶಿಷ್ಟ ಜಾತಿ, ಪಂಗಡ ಉಪಯೋಜನೆ ಹಣವನ್ನು ದುರ್ಬಳಕೆ ಮಾಡಿದ ಸಮಾಜ ಕಲ್ಯಾಣ ಇಲಾಖೆಯಲ್ಲಿ ವಿಶೇಷ ತನಿಖೆಯನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಪ್ರಧಾನ ಸಂಚಾಲಕ ಎಸ್.ಮಾರೆಪ್ಪ, ರಾಜ್ಯ ಸಂಚಾಲಕ ಹೇಮರಾಜ್ ಅಸ್ಕಿಹಾಳ, ಮಾದಿಗ ದಂಡೋರ ಸಂಘದ ಜಿಲ್ಲಾಧ್ಯಕ್ಷ ನರಸಿಂಹಲು ಮರ್ಚಟಹಾಳ, ಸಮಾಜ ಪರಿವರ್ತನಾ ಸಂಘದ ಶ್ರೀನಿವಾಸ ಕೊಪ್ಪರ, ಕದಸಂಸ ಮುಖಂಡ ಎಂ.ಈರಣ್ಣ, ಆರ್‌ಎಸ್‌ಪಿಎಸ್ ಮುಖಂಡ ಶರಣು, ಪ್ರಮುಖರಾದ ತಾಯಪ್ಪ ಗಧಾರ, ನರಸಿಂಹಲು, ಲಕ್ಷö್ಮಣ, ಉರುಕುಂದಪ್ಪ, ಎನ್.ಕೆ.ಕೃಷ್ಣ, ಅನ್ವರ್ ಸೇರಿದಂತೆ ಇತರರಿದ್ದರು.