ರಾಯಚೂರು | ಮತ ಕಳ್ಳತನ ಪ್ರಕರಣವನ್ನು ನ್ಯಾಯಾಂಗ ತನಿಖೆಗೊಳಪಡಿಸಲು ಆಗ್ರಹಿಸಿ ಪ್ರತಿಭಟನೆ
ರಾಯಚೂರು : ಮತ ಕಳ್ಳತನ ಪ್ರಕರಣವನ್ನು ನ್ಯಾಯಾಂಗ ತನಿಖೆಗೊಳಪಡಿಸಿ, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಿಲ್ಲಿಸಲು ಸಿಪಿಐಎಂಎಲ್ ಲಿಬರೇಶನ್ ತಾಲೂಕು ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ನೂತನ ಮಹಾ ನಗರ ಪಾಲಿಕೆ ಶಾಲಿಕೆ ಕಚೇರಿ ಮುಂಭಾಗದಲ್ಲಿ ಜಮಾಹಿಸಿದ ಕಾರ್ಯಕರ್ತರು, 2024ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಹುದೊಡ್ಡ ಚುನಾವಣಾ ಅಕ್ರಮ ಮತ್ತು ಮತ ಕಳವು ನಡೆದಿದೆ ಎಂದು ಆರೋಪಿಸಿದರು.
ಮೇಲ್ನೋಟಕ್ಕೆ ಚುನಾವಣಾ ಪ್ರಕ್ರಿಯೆಯಲ್ಲಿನ ಗಂಭೀರ ಲೋಪದಂತೆ ಕಾಣಿಸುತ್ತಿರುವ ಆರೋಪದ ಬಗ್ಗೆ ವಿಳಂಬ ಮಾಡದೆ ಲೆಕ್ಕಪರಿಶೋಧನೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಮಹ ದೇವಪುರದಲ್ಲೇ ಒಂದು ಲಕ್ಷಕ್ಕೂ ಹೆಚ್ಚು ನಕಲಿ ಮತಗಳು ಪತ್ತೆಯಾಗಿವೆ, ಅವುಗಳಲ್ಲಿ 11,000 ನಕಲಿ ನೋಂದಣಿಗಳಾಗಿದ್ದು, 40,000 ಮತದಾರರ ವಿಳಾಸಗಳು ಅನುಮಾನ ಹುಟ್ಟಿಸುವಂತಿವೆ. 33 ಸಾವಿರ ಪ್ರಕರಣಗಳಲ್ಲಿ 'ನಮೂನೆ-6'ರ ದುರುಪಯೋಗ ನಡೆದಿದೆ, 4,000 ಪ್ರಕರಣಗಳು ಅಮಾನ್ಯ ಛಾಯಾಚಿತ್ರಗಳಿಗೆ ಸಂಬಂಧಿಸಿದವು. ಈ ಅಂಕಿ ಅಂಶಗಳು ನಿಜವಾಗಿದ್ದಲ್ಲಿ, ಚುನಾವಣಾ ಪ್ರಕ್ರಿಯೆ ದೋಷಪೂರಿತವಾಗಿದೆ ಎಂದು ಭಾವಿಸಬೇಕಾಗುತ್ತದೆ ಎಂದು ದೂರಿದರು.
ಮತ ಕಳವು ಸಂವಿಧಾನಕ್ಕೆ ಎಸಗುವ ದ್ರೋಹ ಹಾಗೂ ಪ್ರಜಾಪ್ರಭುತ್ವದ ಮೇಲೆ ನಡೆಸುವ ಆಕ್ರಮಣವಾಗಿದ್ದು, ಇದನ್ನು ನಿಲ್ಲಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಮುಖಂಡರು ಅಜೀಜ್ ಜಾಗೀರದಾರ್, ಮಹಮ್ಮದ್ ಹನೀಫ್ ಅಬಕಾರಿ, ಜಿಲಾನಿ, ಮಹೇಶ್, ಮಹೇಂದ್ರ, ಮುಹಮ್ಮದ್ ಶಾಲಂ, ಮುಹಮ್ಮದ್ ರಫಿ, ಸಾಧಿಕ್ ಹುಸೇನ್, ಹನುಮಪ್ಪ, ಖಾಲಿದ್ ಇದ್ದರು.