×
Ad

ರಾಯಚೂರು | ಆಶಾ ಕಾರ್ಯಕರ್ತೆಯರಿಗೆ 10 ಸಾವಿರ ರೂ. ಗೌರವಧನ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

Update: 2025-07-02 14:19 IST

ರಾಯಚೂರು: ಆಶಾ ಕಾರ್ಯಕರ್ತರಿಗೆ ಮಾಸಿಕ 10 ಸಾವಿರ ರೂ. ಗೌರವ ಧನ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಜಿಲ್ಲಾ ಘಟಕದ ವತಿಯಿಂದ ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.

ಸಂಘದ ಪದಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದಂತೆ ಕೇಂದ್ರ ಸರಕಾರದ ಪ್ರೋತ್ಸಾಹಧನ ಸೇರಿಸಿ ಎ.1ರಿಂದ ಅನ್ವಯವಾಗುವಂತೆ 10 ಸಾವಿರಕ್ಕೆ ರೂ. ಗೌರವಧನ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಜನವರಿ 7ರಿಂದ 10 ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅಶಾ ಕಾರ್ಯಕರ್ತೆಯರಿಗೆ 15 ಸಾವಿರ ರೂ. ಗೌರವಧನ ಹೆಚ್ಚಿಸಲು ಅನಿರ್ಧಿಷ್ಠಾವಧಿ ಹೋರಾಟ ಮಾಡಲಾಗಿತ್ತು. ಇದಕ್ಕೆ ಮುಖ್ಯಮಂತ್ರಿ ಅವರು ಸ್ಪಂದಿಸಿ ಸಂಘದ ಮುಖಂಡರ ಸಭೆ ಕರೆದು 10 ಸಾವಿರ ರೂ. ಗೌರವಧನ ನೀಡಲಾಗುವುದು ಎಂದು ತೀರ್ಮಾನಿಸಲಾಗಿತ್ತು. ಕೂಡಲೇ ಸಭೆಯಲ್ಲಿ ಹೇಳಿದಂತೆ ಆದೇಶ ಹೊರಡಿಸಬೇಕು ಎಂದು ಮನವಿ ಮಾಡಿದರು.

'60 ವರ್ಷ ಮೇಲ್ಪಟ್ಟ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯುವ ಆದೇಶವನ್ನು ಹಿಂಪಡೆಯಬೇಕು. ಬೇರೆ ರಾಜ್ಯಗಳಲ್ಲಿ ಆಶಾ ಕಾರ್ಯಕರ್ತೆಯರ ನಿವೃತ್ತಿ ವಯಸ್ಸನ್ನು 62 ವರ್ಷಕ್ಕೆ ನಿಗದಿಪಡಿಸಲಾಗಿದೆ. ಕರ್ನಾಟಕದಲ್ಲೂ ಆಶಾ ಕಾರ್ಯಕರ್ತೆಯರ ನಿವೃತ್ತಿ ವಯಸ್ಸನ್ನು 62 ವರ್ಷಕ್ಕೆ ಹೆಚ್ಚಿಸಬೇಕು' ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ.ಸೋಮಶೇಖರ ಯಾದಗಿರಿ, ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ ಎನ್.ಎಸ್., ಮುಖಂಡ ಮಹೇಶ ಚೀಕಲಪರ್ವಿ, ಆಶಾ ಕಾರ್ಯಕರ್ತೆಯರಾದ ಮಲ್ಲಮ್ಮ, ದೇವಮ್ಮ, ಮಂಜುಳಾ, ಅಂಬಮ್ಮ ಪಾಲ್ಗೊಂಡಿದ್ದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News