ರಾಯಚೂರು | ಎಸ್‌ಬಿಎಚ್ ನಿವೃತ್ತ ನೌಕರರ ತ್ರೈಮಾಸಿಕ ಸಭೆ
ರಾಯಚೂರು : ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ನಿವೃತ್ತ ನೌಕರರ ಸಂಘದ ತ್ರೈಮಾಸಿಕ ಸಭೆಯು ಇಂದು ಬೆಳಿಗ್ಗೆ ಇಲ್ಲಿನ ಎಸ್‌ಬಿಐ ಎಂಜಿ ರಸ್ತೆ ಶಾಖೆಯಲ್ಲಿ ನಡೆಯಿತು.
ರಾಜ್ಯೋತ್ಸವ ದಿನದಂದು ಅಯೋಜಿಸಲಾಗಿದ್ದ ಈ ಸಭೆಯು ಸಾಮೂಹಿಕ ನಾಡಗೀತೆಯೊಂದಿಗೆ ಆರಂಭಗೊಂಡು ಎಲ್ಲ ಕಾರ್ಯ ಕಲಾಪಗಳು ಕನ್ನಡದಲ್ಲೇ ನಡೆದದ್ದು ವಿಶೇಷವಾಗಿತ್ತು.
ಎಸ್ಬಿಎಚ್ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕ ವೈ.ಶಶಿಧರ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬ್ಯಾಂಕ್ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಕುರಿತ ಚಿಂತನೆ ಸೇರಿದಂತೆ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಯಿತು.
ಪಿಂಚಣಿದಾರರು ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಸಲ್ಲಿಸಬೇಕಾದ ಜೀವನ ಪ್ರಮಾಣ ಪತ್ರ ಮತ್ತು ಆರೋಗ್ಯ ವಿಮೆಯ ಮಹತ್ವ ಕುರಿತಂತೆ ಉಪಯುಕ್ತ ಮಾಹಿತಿ ಒದಗಿಸಲಾಯಿತು. ಈ ಬಗ್ಗೆ ನಡೆದ ಸಂವಾದದಲ್ಲಿ ಹಲವಾರು ಪಿಂಚಣಿದಾರರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಭಾರತೀಯ ಸ್ಟೇಟ್ ಬ್ಯಾಂಕ್ ಎಂಜಿ ರಸ್ತೆ ಶಾಖೆ ಮುಖ್ಯ ವ್ಯವಸ್ಥಾಪಕರಾದ ಆನಂದ ಬಸವರಾಜ ವಾಲಿ ಮತ್ತು ನಿವೃತ್ತ ಆಧಿಕಾರಿ ನಕ್ಕ ಹುಸೇನಪ್ಪಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
75 ವರ್ಷ ಪೂರೈಸಿದ ಮಾನ್ವಿಯ ಮಲ್ಲಿನಮಡುಗು ಮಲ್ಲಿಕಾರ್ಜುನ, ದೇವದುರ್ಗದ ಚಂದ್ರ ಮೋಹನ ದೇಸಾಯಿ, ಸಂಘದ ಕ್ರಿಯಾಶೀಲ ಸದಸ್ಯರಾದ ರಮೇಶ ಹೀರಾ, ಸುಧಾಕರರಾವ್ ಅವರನ್ನು ಸಭೆಯಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಹೊಸ ಪಿಂಚಣಿದಾರರಾದ ಜಿ ಬಿ ಶಾಸ್ತ್ರಿ, ಹನುಮೇಶ ಬಾಬು ಹೂಲಗೇರಿ ಅವರನ್ನು ಸಂಘಕ್ಕೆ ಬರಮಾಡಿಕೊಳ್ಳಲಾಯಿತು. ರಾಜೊಳ್ಳಿ ನಾಗಪ್ಪ, ಸಾಬಿರ್ ಅಹಮದ್, ಬಾಬು ಬಳಗಾನೂರ್, ಭೀಮಪ್ಪ, ಮದನಮೋಹನರಾವ್, ಸಿಕೆಎಂ ಆಚಾರ್ಯುಲು, ಕಲಾವತಿ ಕೋಸಗಿ, ಸಿದ್ದಯ್ಯ, ಶೇಖರ್ ಮುಂತಾದವರು ಸಭೆಯಲ್ಲಿ ಮಾತನಾಡಿ ತಮ್ಮ ವಿಚಾರಗಳನ್ನು ಹಂಚಿಕೊಂಡರು.
ಸಂಘದ ಕಾರ್ಯದರ್ಶಿ ಕಂದೂರು ಶ್ರೀನಿವಾಸ ಅವರು ವರದಿ ವಾಚನ ಮಾಡಿದರು. ಖಜಾಂಚಿ ಪತಂಗೆ ಹನುಮಂತರಾವ್ ಲೆಕ್ಕ ಪತ್ರ ಒಪ್ಪಿಸಿದರು. ರಮೇಶ ಹೀರಾ ಅವರು ಪ್ರಾರ್ಥನೆಗೈದರು. ಭೀಷ್ಮಾಚಾರ್ ವಂದನೆ ಸಲ್ಲಿಸಿದರು. ಶ್ರೀನಿವಾಸ ಗಟ್ಟು ಕಾರ್ಯಕ್ರಮ ನಿರೂಪಣೆ ಮಾಡಿದರು.
ಈ ಸಂದರ್ಭದಲ್ಲಿ ಅಪೋಲೋ ಫಾರ್ಮಸಿ ವತಿಯಿಂದ ಪಿಂಚಣಿದಾರರ ಉಚಿತ ಆರೋಗ್ಯ ತಪಾಸಣೆಯನ್ನು ಏರ್ಪಡಿಸಲಾಗಿತ್ತು. ಕಳೆದ ಅವಧಿಯಲ್ಲಿ ನಿಧನರಾದ ಪಿಂಚಣಿದಾರರ ಗೌರವಾರ್ಥ ಎರಡು ನಿಮಿಷ ಮೌನ ಆಚರಿಸಲಾಯಿತು.