ರಾಯಚೂರು | ಉಪ ಲೋಕಾಯುಕ್ತರ ಕಾರ್ಯಕ್ರಮದ ವೇದಿಕೆಯ ಸಿದ್ಧತೆಯ ಪರಿಶೀಲನೆ
ರಾಯಚೂರು: ಗೌರವಾನ್ವಿತ ನ್ಯಾಯಮೂರ್ತಿ ಹಾಗೂ ಉಪ ಲೋಕಾಯುಕ್ತರಾದ ಬಿ.ವೀರಪ್ಪ ಅವರು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲು ಮತ್ತು ರಾಯಚೂರಿಗೆ ಸಂಬಂಧಿಸಿದ ಬಾಕಿ ಇರುವ ದೂರುಗಳ ವಿಚಾರಣೆ ಮತ್ತು ವಿಲೇವಾರಿ ಕಾರ್ಯಕ್ರಮವನ್ನು ಆಗ.29 ಮತ್ತು ಆ.30ರಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದ ಜಗಜ್ಯೋತಿ ಬಸವೇಶ್ವರ ಸಭಾಂಗಣದಲ್ಲಿ ಹಮ್ಮಿಕೊಂಡ ಹಿನ್ನೆಲೆಯಲ್ಲಿ ರಾಯಚೂರಿನ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಸತೀಶ್ ಎಸ್.ಚಿಟಗುಬ್ಬಿ ಅವರು ಆ.26ರಂದು ಕಾರ್ಯಕ್ರಮದ ವೇದಿಕೆಯ ಸಿದ್ಧತೆಗಳನ್ನು ಪರಿಶೀಲಿಸಿದರು.
ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿನ ರಜತ್ ಮಹೋತ್ಸವದ ಸಭಾಂಗಣದಲ್ಲಿ ಆ.26ರಂದು ಪೂರ್ವಭಾವಿ ಸಿದ್ಧತಾ ಸಭೆ ನಡೆಸಿದ ಬಳಿಕ ಜಗಜ್ಯೋತಿ ಬಸವೇಶ್ವರ ಸಭಾಂಗಣಕ್ಕೆ ತೆರಳಿ ವೇದಿಕೆಯ ಸಿದ್ಧತೆಯನ್ನು ಖುದ್ದು ಪರಿಶೀಲಿಸಿದರು.
ಆ.29 ಮತ್ತು ಆ.30ರಂದು ಎರಡು ದಿನಗಳ ಕಾಲ ವೇದಿಕೆಯ ಕಾರ್ಯಕ್ರಮವು ಅಚ್ಚುಕಟ್ಟಾಗಿ ನಡೆಯಬೇಕು. ಮಾನ್ಯ ಉಪ ಲೋಕಾಯುಕ್ತರು ಮತ್ತು ಇನ್ನೀತರ ಗಣ್ಯರು, ಮಾಧ್ಯಮ ಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರಿಗೆ ಆಸನದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಬೇಕು. ಆಸನಗಳಿಗೆ ಸ್ಟೀಕರ್ ಅಂಟಿಸಿ ಶಿಸ್ತು ಕಾಯ್ದುಕೊಳ್ಳಬೇಕು. ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಸರಿಯಾಗಿ ಇರಬೇಕು. ಒಳಾಂಗಣ ಮತ್ತು ಹೊರಾಂಗಣದಲ್ಲಿ ಸಾಕಷ್ಟು ಶುಚಿತ್ವ ಕಾಯ್ದುಕೊಳ್ಳಬೇಕು ಎಂದು ಸೂಚನೆ ನೀಡಿದರು.
ವೇದಿಕೆಯ ಮೇಲೆ ನೈಜ ಪುಷ್ಪಾಲಂಕಾರ ಮತ್ತು ವೇದಿಕೆಯ ಮುಂಭಾಗದಲ್ಲಿ ತೋಟಗಾರಿಕಾ ಸಸಿಗಳನ್ನು ಇಟ್ಟು ವೇದಿಕೆಯನ್ನು ಅಲಂಕೃತಗೊಳಿಸಬೇಕು ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಮುಹಮ್ಮದ್ ಅಲಿ ಅವರಿಗೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಸೂಚನೆ ನೀಡಿದರು.
ವೇದಿಕೆಗೆ ಬೇಕಾಗುವ ಮ್ಯಾಟ್, ಟೇಬಲ್, ಖುರ್ಚಿ, ಹೊರಗಡೆ ಸಾರ್ವಜನಿಕರಿಗೆ ಶ್ಯಾಮಿಯಾನ ಸೇರಿದಂತೆ ಅವಶ್ಯಕ ಸಾಮಗ್ರಿಗಳಿಗೆ ಕೂಡಲೇ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜೇರಿ, ಮುಖ್ಯ ಯೋಜನಾಧಿಕಾರಿ ಟಿ.ರೋಣಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರವೀಣಕುಮಾರ ಅವರಿಗೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದ ರಿಜಿಸ್ಟಾರ್ ಶರಣಬಸಪ್ಪ ಕೋಟೆಪ್ಪಗೋಳ, ಲೋಕಾಯುಕ್ತ ಡಿಎಸ್ಪಿ ವಸಂತಕುಮಾರ, ಲೋಕಾಯುಕ್ತ ಡಿವೈಎಸ್ಪಿ ರವಿ ಪುರುಷೋತ್ತಮ, ತೋಟಗಾರಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.