ರಾಯಚೂರು | ಶಾಲೆಯ ಪ್ರಾರ್ಥನೆ ವೇಳೆ ನೂಕು ನುಗ್ಗಲು : ವಿದ್ಯಾರ್ಥಿನಿಗೆ ಗಾಯ
ರಾಯಚೂರು: ರಾಯಚೂರು ತಾಲೂಕಿನ ಮರ್ಚೆಡ್ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ ಪ್ರಾರ್ಥನೆ ಮಾಡುವ ವೇಳೆ ಶಿಕ್ಷಕರು ಇಲ್ಲದಿದ್ದಾಗ ಸರತಿ ಸಾಲಿನಲ್ಲಿ ನಿಂತ ವಿದ್ಯಾರ್ಥಿಗಳು ನೂಕು ನುಗ್ಗಲು ಮಾಡಿಕೊಂಡಿದ್ದರಿಂದ ವಿದ್ಯಾರ್ಥಿಯೊಬ್ಬಳಿಗೆ ಕೈ ಮುರಿದುಕೊಂಡ ಆರೋಪ ಕೇಳಿ ಬಂದಿದೆ.
ಸೋನಿ (10) ನಾಲ್ಕನೇ ತರಗತಿಯ ವಿದ್ಯಾರ್ಥಿ ಗಾಯಗೊಂಡಿರುವ ಬಾಲಕಿ ಎನ್ನಲಾಗಿದೆ. ಶಾಲೆಗೆ ಸರಿಯಾದ ಸಮಯಕ್ಕೆ ಶಿಕ್ಷಕರು ಬಾರದಿದ್ದಾಗ ವಿದ್ಯಾರ್ಥಿಗಳು ನಿಗದಿತ ವೇಳೆಗೆ ಪ್ರಾರ್ಥನೆಗೆ ನಿಂತಿದ್ದರು, ಈ ವೇಳೆ ಗುಂಪಿನಲ್ಲಿದ್ದ ವಿದ್ಯಾರ್ಥಿಯೊಬ್ಬ ಹಾವು ಬಂದಿದೆ ಎಂದು ಗುಲ್ಲೆಬ್ಬಿಸಿದ್ದು, ಈ ವೇಳೆ ನೂಕು ನುಗ್ಗಲು ಉಂಟಾದಾಗ ವಿದ್ಯಾರ್ಥಿನಿ ಬಿದ್ದು ಗಾಯಗೊಂಡಿದ್ದಾರೆ ಎನ್ನಲಾಗಿದೆ
ಘಟನೆಯ ಬಳಿಕ ಶಾಲೆಗೆ ಬಂದ ಪೋಷಕರು ಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಹಿತಿ ತಿಳಿದು ಗೈರಾಗಿದ್ದ ಶಿಕ್ಷಕರು ಶಾಲೆಗೆ ಬಂದಿದ್ದಾರೆ. ಆ ವೇಳೆ ಬಾಲಕಿಯ ಪೋಷಕರು, ಗ್ರಾಮಸ್ಥರು ಶಾಲೆಯಲ್ಲಿ ಜಮಾಯಿಸಿ, ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಲೆಯ ಶಿಕ್ಷಕರಾಗಿ ನಿಮ್ಮ ಜವಾಬ್ದಾರಿ ಏನು? ಮಕ್ಕಳ ರಕ್ಷಣೆ ಯಾರದ್ದು? ಇನ್ನೊಮ್ಮೆ ಇಂತಹ ಘಟನೆ ನಡೆದರೆ ಶಿಕ್ಷಕರಿಗೆ ಬಹಿಷ್ಕಾರ ಹಾಕುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಗಾಯಗೊಂಡ ವಿದ್ಯಾರ್ಥಿನಿಯನ್ನು ಹೆಚ್ಚಿನ ಚಿಕಿತ್ಸೆಗೆ ರಾಯಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ರಿಮ್ಸ್) ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.