×
Ad

ರಾಯಚೂರು | ಕೆರೆಗಳನ್ನು ತುಂಬಿಸಲು ಯುದ್ಧೋಪಾದಿಯಲ್ಲಿ ಕ್ರಮ ವಹಿಸಿ: ಜಿಲ್ಲಾಧಿಕಾರಿ ನಿತೀಶ್ ಕೆ.

Update: 2025-03-05 19:39 IST

ರಾಯಚೂರು : ಈ ಹಿಂದೆ ಸಭೆ ನಡೆಸಿ ನಿರ್ದೇಶನ ನೀಡಿದಂತೆ ರಾಯಚೂರು ಜಿಲ್ಲೆಯಲ್ಲಿನ ಕೆರೆಗಳನ್ನು ತುಂಬಿಸುವ ಕಾರ್ಯವನ್ನು ಯುದ್ದೋಪಾದಿಯಲ್ಲಿ ಮುಂದುವರೆಸಬೇಕು. ವಾರದೊಳಗೆ ಕೆರೆಗಳನ್ನು ತುಂಬಿಸಲು ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಹೇಳಿದರು.

ನೂತನ ಜಿಲ್ಲಾಡಳಿತ ಭವನದಲ್ಲಿ ಮಾ.5ರಂದು ವಿವಿಧ ತಾಲೂಕುಗಳ ತಹಶೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ನೊಡಲ್ ಅಧಿಕಾರಿಗಳು ಹಾಗೂ ಇನ್ನೀತರ ಇಲಾಖೆಗಳ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು.

ಕುಡಿಯುವ ನೀರು ಪೂರೈಕೆ, ಕೆರೆ ತುಂಬಿಸುವುದು ಸೇರಿದಂತೆ ಬರ ನಿರ್ವಹಣೆಯ ಬಗ್ಗೆ ಉಪ ವಿಭಾಗಾಧಿಕಾರಿಗಳು ಮತ್ತು ಎಲ್ಲ ತಾಲೂಕುಗಳ ತಹಶೀಲ್ದಾರರು ಸೂಕ್ತ ರೀತಿಯಲ್ಲಿ ಮೇಲ್ವಿಚಾರಣೆ ಮಾಡಬೇಕು. ಆಯಾ ಕಡೆಗೆ ಸಭೆಗಳನ್ನು ನಡೆಸಿ ವರದಿ ಮಾಡಬೇಕು.

ಬೇಸಿಗೆಯ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಬಹುದಾದ ಸಮಸ್ಯಾತ್ಮಕ ಹಳ್ಳಿಗಳ ಪಟ್ಟಿ ಮಾಡಬೇಕು. ಇರುವ ನೀರಿನ ಮೂಲಗಳ ಸಂರಕ್ಷಣೆ ಮಾಡಬೇಕು. ತುರ್ತು ಸಂದರ್ಭ ಎದುರಾದಾಗ ಬಾಡಿಗೆ ಪಡೆಯಲು ಅನುಕೂಲವಾಗುವಂತೆ ಈಗಿನಿಂದಲೇ ಖಾಸಗಿ ಬೊರವೆಲ್‌ಗಳನ್ನು ಗುರುತಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ಪಾಂಡ್ವೆ ಅವರು ಮಾತನಾಡಿ, ಆಯಾ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಎಲ್ಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಬೇಸಿಗೆಯ ಈ ಅವಧಿಯಲ್ಲಿ ಕಾಳಜಿ ವಹಿಸಿ ಕಾರ್ಯನಿರ್ವಹಿಸಬೇಕು. ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಕುಡಿಯುವ ನೀರಿನ ಪೂರೈಕೆ ಮಾಡುವಾಗ ವಿದ್ಯುತ್ ಕಡಿತ ಆಗದಂತೆ ಜೆಸ್ಕಾಂ ಜೊತೆಗೆ ಸರಿಯಾಗಿ ಸಮನ್ವಯ ಮಾಡಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪುಟ್ಟಮಾದಯ್ಯ ಎಂ ಅವರು ಮಾತನಾಡಿ, ಕೆರೆಗಳನ್ನು ತುಂಬಿಸಲು ಜನರ ಸಹಕಾರ ಅಗತ್ಯವಾಗಿದೆ. ಯಾವುದೇ ಕಡೆಗಳಲ್ಲಿ ಅವಘಡಗಳಾಗದಂತೆ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಕೆರೆಗಳನ್ನು ತುಂಬಿಸಲು ಪೊಲೀಸ್ ಇಲಾಖೆಯಿಂದ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.

ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಮಾತನಾಡಿ, ದೇವದುರ್ಗ, ಲಿಂಗಸೂರ, ಮಾನವಿ, ರಾಯಚೂರು, ಸಿಂಧನೂರ ಮತ್ತು ಮಸ್ಕಿ ಹಾಗೂ ಸಿರವಾದ ಸೇರಿ ಒಟ್ಟು 265 ಕೆರೆಗಳ ಪೈಕಿ ಈಗಾಗಲೇ 44 ಕೆರೆಗಳನ್ನು ಪುರ್ಣಪ್ರಮಾಣದಲ್ಲಿ ತುಂಬಿಸಲಾಗಿದೆ. 197 ಕೆರೆಗಳು ಭಾಗಶಃ ತುಂಬಿವೆ. 21 ಕೆರೆಗಳನ್ನು ತುಂಬಿಸುವುದು ಇನ್ನು ಬಾಕಿ ಎಂದು ಸಭೆಗೆ ಮಾಹಿತಿ ನೀಡಿದರು.

ಮುಂಬರುವ ತಿಂಗಳುಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಬಹುದಾದ ಗ್ರಾಮಗಳು ದೇವದುರ್ಗ ತಾಲೂಕಿನಲ್ಲಿ 69, ಲಿಂಗಸೂರ ತಾಲೂಕಿನಲ್ಲಿ 29, ಮಾನವಿ ತಾಲೂಕಿನಲ್ಲಿ 7, ರಾಯಚೂರು ತಾಲೂಕಿನಲ್ಲಿ 17, ಸಿಂಧನೂರ ತಾಲೂಕಿನಲ್ಲಿ 19, ಮಸ್ಕಿ ತಾಲೂಕಿನಲ್ಲಿ 55, ಸಿರವಾರ ತಾಲೂಕಿನಲ್ಲಿ 56 ಇರುತ್ತವೆ ಎಂದು ಅಂದಾಜಿಸಲಾಗಿದೆ ಎಂದು ಆಯಾ ತಾಲೂಕಿನ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಕುಡಿಯುವ ನೀರಿನ ಕೊರತೆಯಾಗಬಹುದು ಎಂದು ಹೆಚ್ಚಿನ ನೀರು ಪೂರೈಸಬಹುದು ಎಂದು ದೇವದುರ್ಗ ತಾಲೂಕಿನಲ್ಲಿ ಈಗಾಗಲೇ 71 ಬೋರವೆಲ್‌ಗಳು, ಮಾನ್ವಿ ಹಾಗೂ ಸಿಂಧನೂರ ತಾಲೂಕುಗಳಲ್ಲಿ ತಲಾ 7 ಹಾಗೂ ಮಸ್ಕಿ ತಾಲೂಕಿನಲ್ಲಿ 29 ಮತ್ತು ಸಿರವಾರ ತಾಲೂಕಿನಲ್ಲಿ 30 ಖಾಸಗಿ ಬೋರವೆಲಗಳನ್ನು ಒಪ್ಪಂದಕ್ಕಾಗಿ ಗುರುತಿಸಲಾಗಿದೆ ಎಂದು ಆಯಾ ತಾಲೂಕಿನ ತಹಸೀಲ್ದಾರರು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ತಾಲೂಕುವಾರು ನೋಡಲ್ ಅಧಿಕಾರಿಗಳೆಂದು ನೇಮಕವಾದ ಸಹಾಯಕ ಆಯುಕ್ತರಾದ ಗಜಾನನ ಬಾಲೆ, ಬಸವಣಪ್ಪ ಕಲಶೆಟ್ಟಿ, ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಶಶಿಕಾಂತ ಶಿವಪುರೆ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಶರಣಬಸವರಾಜ ಕೆಸರಟ್ಟಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಜಯಪ್ರಕಾಶ ಸಿ..ಟಿ., ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಚಿದಾನಂದ ಹಾಗೂ ಇನ್ನೀತರ ಇಲಾಖೆಗಳ ಅಧಿಕಾರಿಗಳು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News