×
Ad

ರಾಯಚೂರು | ಟೈರ್ ಸ್ಫೋಟದಿಂದ ವಾಹನ ಪಲ್ಟಿ: 3 ವಿದ್ಯಾರ್ಥಿಗಳ ಸಹಿತ ನಾಲ್ವರು ಮೃತ್ಯು

Update: 2025-01-22 09:46 IST

ರಾಯಚೂರು: ಕ್ರೂಸರ್ ವಾಹನವೊಂದು ಟೈರ್ ಸ್ಫೋಟಗೊಂಡು ರಸ್ತೆಯಲ್ಲಿ ಉರುಳಿಬಿದ್ದ ಮೂವರು ವಿದ್ಯಾರ್ಥಿಗಳು ಸೇರಿದಂತೆ ನಾಲ್ವರು ಮೃತಪಟ್ಟ ಘಟನೆ ಸಿಂಧನೂರು ತಾಲೂಕಿನ ಅರಗಿನಮರ ಕ್ಯಾಂಪ್ ಬಳಿ ಮಂಗಳವಾರ ರಾತ್ರಿ 10:30ರ ಸುಮಾರಿಗೆ ನಡೆದಿದೆ.

ಮಂತ್ರಾಲಯದ ಗುರು ಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ವಿದ್ಯಾರ್ಥಿಗಳಾದ ಹಯವದನ(18), ಸುಜಯೇದ್ರ (22) ಹಾಗೂ ಅಭಿಲಾಷ್(20) ಮತ್ತು ಕ್ರೂಸರ್ ಚಾಲಕ ಕಂಸಾಲಿ ಶಿವ (24) ಮೃತಪಟ್ಟವರು ಎಂದು ತಿಳಿದುಬಂದಿದೆ.

ಘಟನೆಯಲ್ಲಿ ವಾಹನದಲ್ಲಿದ್ದ ಇತರ 10 ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರು ಮಂತ್ರಾಲಯದಿಂದ ಕೊಪ್ಪಳ ಜಿಲ್ಲೆಯ ಆನೆಗುಂದಿ ಹತ್ತಿರ ನರಹರಿ ತೀರ್ಥರ ಆರಾಧನಾ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ತೆರಳುತ್ತಿದ್ದ ವೇಳೆ ದಾರಿಮಧ್ಯೆ ಈ ಅಪಘಾತ ಸಂಭವಿಸಿದೆ. ರಾಯಚೂರಿನಿಂದ ಸಿಂಧನೂರಿಗೆ ಬರುವ ಮುಖ್ಯ ರಸ್ತೆಯಲ್ಲಿ ಸಿಂಧನೂರು ವೈಷ್ಣವಿದೇವಿ ಗುಡಿ ಕ್ರಾಸ್ ಬಳಿ ಕ್ರೂಸರ್ ವಾಹನದ ಟೈರ್ ಸ್ಫೋಟಗೊಂಡಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿದ ವಾಹನ ಉರುಳಿಬಿದ್ದಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸಿಂಧನೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News