ರಾಯಚೂರು | ಗೋ ಸಾಗಣೆ ಆರೋಪಿಸಿ ವಾಹನಕ್ಕೆ ತಡೆ: ಎರಡು ಗುಂಪುಗಳ ನಡುವೆ ಮಾರಾಮಾರಿ, ಆಸ್ಪತ್ರೆಗೆ ದಾಖಲು
ರಾಯಚೂರು: ಗೋವುಗಳನ್ನು ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ ವಾಹನ ತಡೆದಿದ್ದಕ್ಕೆ ಸಂಘಪರಿವಾರದ ಕಾರ್ಯಕರ್ತರು ಹಾಗೂ ಇನ್ನೊಂದು ಗುಂಪಿನ ನಡುವೆ ವಾಗ್ವಾದ ನಡೆದು, ಮಾರಾಮಾರಿ ಸಂಭವಿಸಿ ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ.
ಸಿಂಧನೂರು ಪಟ್ಟಣದ ನ್ಯಾಷನಲ್ ಲೇಔಟ್ ಬಳಿಯ ದನದ ಸಂತೆಗೆ ಗೋವುಗಳನ್ನು ಸಾಗಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಗೂಡ್ಸ್ ವಾಹನವನ್ನು ಸಂಘಪರಿವಾರದ ಕಾರ್ಯಕರ್ತರು ತಡೆದಿದ್ದಾರೆ. ಆದರೆ ಈ ವೇಳೆ ಗೂಡ್ಸ್ ವಾಹನದಲ್ಲಿ ಗೋವುಗಳು ಇರಲಿಲ್ಲ, ಖಾಲಿ ವಾಹನ ತಡೆದಿದ್ದಕ್ಕೆ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದು ಪರಸ್ಪರ ಮಾರಾಮಾರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳಾದವರಿಗೆ ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಳಕ್ಕೆ ಸಿಂಧನೂರು ನಗರ ಠಾಣೆಯ ಪೊಲೀಸರ ಭೇಟಿ ನೀಡಿ, ಗಾಯಾಳುಗಳ ಹೇಳಿಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ಕುರಿತು ಇದುವರೆಗೂ ಪ್ರಕರಣ ದಾಖಲಾಗಿಲ್ಲ. ಘಟನೆಯ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಸಿಂಧನೂರು ಪೊಲೀಸರು ತಿಳಿಸಿದ್ದು, ಗೋ ರಕ್ಷಣೆ ಹೆಸರಿನಲ್ಲಿ ಸಂಘಪರಿವಾರದ ಕಾರ್ಯಕರ್ತರು ಹೋಗಿದ್ದಾರೆ. ಈ ವೇಳೆ ಎರಡು ಗುಂಪುಗಳು ನಡುವೆ ವಾಗ್ವಾದ ನಡೆದು, ಪರಸ್ಪರ ಮಾರಾಮಾರಿ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.