ರಾಯಚೂರು | ಸರ್ವಧರ್ಮ ಸಾಮೂಹಿಕ ವಿವಾಹಕ್ಕೆ ವಿಜಯೇಂದ್ರ ಚಾಲನೆ
ಬಿ.ವೈ.ವಿಜಯೇಂದ್ರ
ರಾಯಚೂರು : ಜಿಲ್ಲೆಗೆ ಏಮ್ಸ್ ಮಂಜೂರು ಮಾಡಲು ಕೇಂದ್ರ ಸರಕಾರದ ಜೊತೆ ಹಾಗೂ ವರಿಷ್ಠರ ಜೊತೆ ಚರ್ಚಿಸಲಾಗುವುದು. ಈ ಭಾಗದಲ್ಲಿ ಕೈಗಾರಿಕೆ ಸ್ಥಾಪಿಸಿ ಉದ್ಯೋಗವಕಾಶ ಕಲ್ಪಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಕೆ.ಎಸ್.ಎನ್ ಸೇವಾ ಸಮಿತಿಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಆಹಾಕಾರವಿದ್ದು, ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸಮರ್ಪಕ ನೀರು ಸಿಗುತ್ತಿಲ್ಲ. ಈ ಭಾಗದಲ್ಲಿ ದುಡಿಯುವ ಜನಾಂಗಕ್ಕೆ ಕೆಲಸವಿಲ್ಲ. ಇಂತಹ ಧಾರುಣ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ರಾಯಚೂರು ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಸಮಾಜದ ಹಿತಕ್ಕಾಗಿ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಕೆ.ಶಿವನಗೌಡ ನಾಯಕ ಅವರ ಸಾಮಾಜಿಕ ಕಳಕಳಿ ಅತ್ಯಂತ ಸಂತೋಷ ತಂದಿದ್ದು, ಇಂದು ಹಮ್ಮಿಕೊಂಡಿರುವ ಸಾಮೂಹಿಕ ವಿವಾಹ ಕಾರ್ಯಕ್ರಮ ಅತ್ಯಂತ ಅಭೂತಪೂರ್ವ ಕಾರ್ಯಕ್ರಮವಾಗಿದೆ ಎಂದರು.
ಉತ್ತರ ಕರ್ನಾಟಕದ ಜನರು ಬಡವರಿರಬಹುದು ಆದರೆ ಹೃದಯವಂತಿಕೆಯಲ್ಲಿ ಹಾಗೂ ಪ್ರೀತಿ ತೋರಿಸುವುದರಲ್ಲಿ ಅತ್ಯಂತ ಶ್ರೀಮಂತರು ಎಂದು ಬಿ.ಎಸ್.ಯಡಿಯೂರಪ್ಪ ಅವರು ಹೇಳುತ್ತಿದ್ದರು. ಅದೀಗ ನಿಜವೆನಿಸುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ರೈತರಿಗಾಗಿ ವಿಶೇಷವಾದ ಪ್ರತ್ಯೇಕ ಬಜೆಟ್ ಮಂಡಿಸಿದ್ದ ಯಡಿಯೂರಪ್ಪ ಅವರ ಹಾದಿಯಲ್ಲಿ ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದ ಜನರ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯಗಳನ್ನು ಮಾಡುವುದಾಗಿ ತಿಳಿಸಿದರು.
ಪ್ರಮುಖವಾಗಿ ಜಿಲ್ಲೆಗೆ ಏಮ್ಸ್ ಮಂಜೂರು ಮಾಡಿಸುವ ವಿಚಾರದಲ್ಲಿ ಶಿವನಗೌಡ ನಾಯಕ ಅತ್ಯಂತ ಹೆಚ್ಚಿನ ಕಾಳಜಿ ವಹಿಸಿದ್ದು, ಕೇಂದ್ರದ ವರಿಷ್ಠರೊಂದಿಗೆ ಚರ್ಚಿಸಿ ಜಿಲ್ಲೆಗೆ ಏಮ್ಸ್ ಮಂಜೂರು ಮಾಡಿಸಲು ಶ್ರಮಿಸುವುದಾಗಿ ಹೇಳಿದರು. ಕಾರ್ಯಕ್ರಮ ಉದ್ದೇಶಿಸಿ ಅನೇಕ ನಾಯಕರುಗಳು ಮಾತನಾಡಿದರು.
ಕಾರ್ಯಕ್ರಮದಲ್ಲಿ ನೂರಾರು ಜೋಡಿಗಳು ವಿವಾಹ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಠಾಧೀಶರಾದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಪ್ರಸನ್ನಾನ್ನಾನಂದಪುರಿ ಸ್ವಾಮೀಜಿ, ಅಭಿನವ ರಾಚೋಟಿ ವೀರಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ಕೆ.ಶಿವನಗೌಡ ನಾಯಕ, ಶಾಸಕ ಜನಾರ್ಧನರೆಡ್ಡಿ, ಮಾಜಿ ಸಂಸದ ಬಿ.ವಿ.ನಾಯಕ, ಮಾಜಿ ಸಚಿವ ಬೈರತಿ ಸುರೇಶ, ಹನುಮಂತಪ್ಪ ಆಲ್ಕೊಡ್, ಶಾಸಕ ಡಾ.ಶಿವರಾಜ ಪಾಟೀಲ್, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ತಿಪ್ಪರಾಜು ಹವಾಲ್ದಾರ್, ತಿಮ್ಮಾರೆಡ್ಡಿ ಭೋಗಾವತಿ, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಎಂ.ಈರಣ್ಣ, ಬಾಲಸ್ವಾಮಿ ಕೊಡ್ಲಿ, ಸೇರಿದಂತೆ ನೂರಾರು ಜನರು ಭಾಗಿಯಾದರು.