ರಾಯಚೂರು | ಉಡಮಗಲ್ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ
ರಾಯಚೂರು : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸರ್ಕಾರಿ ಪ್ರೌಢಶಾಲೆ ಉಡಮಗಲ್ ಖಾನಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಉಡಮಗಲ್ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹ ಕಾರ್ಯದರ್ಶಿಯಾಗಿರುವ ಕನ್ನಡ ಕಲಾ ಶಿಕ್ಷಕರಾದ ಡಾ.ದಂಡಪ್ಪ ಬಿರಾದಾರ್ ಅವರು ಸಸಿಗೆ ನೀರು ಹಾಕಿ, ಉದ್ಘಾಟಿಸಿ ಮಾತನಾಡಿದರು.
ನಮ್ಮ ದೇಶದ ಜನಸಂಖ್ಯೆಯು ಇದೀಗ 145 ಕೋಟಿಗೆ ತಲುಪುತ್ತಿದೆ. ಈ ಜನಸಂಖ್ಯಾ ಸ್ಪೋಟವನ್ನು ನಿಯಂತ್ರಣ ಮಾಡದಿದ್ದಲ್ಲಿ ಬಹಳಷ್ಟು ಸಮಸ್ಯೆಗಳು ಎದುರಾಗುತ್ತವೆ ಎಂದು ಕಳವಳ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯ ಗುರುಗಳಾದ ವೀರೇಶ್ ಅಂಗಡಿ ಮಾತನಾಡಿ, ಕುಟುಂಬದಲ್ಲಿ ಸದಸ್ಯರ ಸಂಖ್ಯೆ ಹೆಚ್ಚಾದಂತೆ ಹೊಂದಾಣಿಕೆ ಸಮಸ್ಯೆ ಎದುರಾಗುತ್ತದೆ. ನನಗೆ ಕಮ್ಮಿ, ನಿನಗೆ ಹೆಚ್ಚು ಎನ್ನುವಂತಹ ತಾರತಮ್ಯ ಭಾವನೆಗಳು ಉದ್ಭವಿಸುತ್ತವೆ. ಆಸ್ತಿ, ಹಣಗಳಿಕೆಯಂತಹ ಸಮಸ್ಯೆಗಳು ಎದುರಾಗುತ್ತವೆ. ಇದನ್ನು ಪ್ರತಿಯೊಬ್ಬರು ಅರಿತು ಜನಸಂಖ್ಯೆ ನಿಯಂತ್ರಣಕ್ಕೆ ಸಹಕರಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗರಾಜ್ ಅವರು ಮಾತನಾಡಿದರು.
ವಿದ್ಯಾರ್ಥಿನಿಯರಾದ ಗೀತಾ, ಶೋಭಾ, ಸಿಂಧು ಪ್ರಾರ್ಥಿಸಿದರು. ವಿದ್ಯಾರ್ಥಿನಿ ಭಾವನಾ ಸ್ವಾಗತಿಸಿದಳು. ಪೂರ್ಣಿಮಾ ವಂದಿಸಿದಳು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು