ರಾಯಚೂರು | ವಿದ್ಯುತ್ ಆಘಾತದಿಂದ ಯುವಕ ಮೃತ್ಯು
ರಾಯಚೂರು: ವಿದ್ಯುತ್ ಆಘಾತಕ್ಕೆ ಒಳಗಾಗಿ ಯುವಕನೋರ್ವ ಮೃತಪಟ್ಟ ಘಟನೆ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದ ಕೋಟೆ ಎಂಬಲ್ಲಿ ಗುರುವಾರ ಸಂಜೆ ನಡದಿದೆ.
ಮೃತನನ್ನು ಸಂದೀಪ್ ಸಿಂಗ್ ಮಂಗಲಸಿಂಗ್ ಗುಂತಕಲ್ (36) ಎಂದು ಗುರುತಿಸಲಾಗಿದೆ.
ಕೋಟೆ ಮುಂಭಾಗದ ಪ್ರಾಂಗಣದಲ್ಲಿ ಗುರುವಾರ ರಾತ್ರಿ ಮುಹರ್ರಂ ಆಚರಣೆಗೆ ಸಿದ್ಧತೆ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಸಂದೀಪ್ ಸಿಂಗ್ ಸಂಜೆ ವೇಳೆ ಚೌಡಿಕಟ್ಟೆಯ ಹತ್ತಿರ ಗೋಬಿ ಮಂಚೂರಿ ಸ್ಟಾಲ್ ಹಾಕಲು ಸಿದ್ಧತೆ ನಡೆಸುತ್ತಿದ್ದರು. ಅದಕ್ಕಾಗಿ ವಿದ್ಯುತ್ ತಂತಿ ಜೋಡಿಸುತ್ತಿದ್ದ ವೇಳೆ ಆಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ 17 ವರ್ಷಗಳಿಂದಲೂ ಪ್ರತೀ ವರ್ಷ ಮುಹರ್ರಂ ಆಚರಣೆಯ ಸಂದರ್ಭದಲ್ಲಿ ಸಂದೀಪ್ ಸಿಂಗ್ ಗೋಬಿ ಮಂಚೂರಿ ವ್ಯಾಪಾರ ಮಾಡಲು ಮುದಗಲ್ ಪಟ್ಟಣಕ್ಕೆ ಆಗಮಿಸುತ್ತಿದ್ದರು.
ಘಟನಾ ಸ್ಥಳಕ್ಕೆ ಮುದಗಲ್ ಪಿಎಸ್ಸೈ ವೆಂಕಟೇಶ ಮಾಡಗೇರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ಬಗ್ಗೆ ಮುದಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.