ರಾಯಚೂರು | ಸೈಬರ್ ಅಪರಾಧಗಳಿಗೆ ಯುವಕರು ಬಲಿ : ಜಾಗೃತರಾಗಲು ನ್ಯಾ.ಮಾರುತಿ ಬಗಾಡೆ ಸಲಹೆ
ರಾಯಚೂರು : ಸೈಬರ್ ಅಪರಾಧಗಳಿಗೆ ಯುವಕರು ಮತ್ತು ವಿದ್ಯಾವಂತರೇ ಹೆಚ್ಚು ಬಲಿಯಾಗುತ್ತಿದ್ದು, ಇದನ್ನು ತಡೆಗಟ್ಟಲು ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾ.ಮಾರುತಿ ಬಗಾಡೆ ಹೇಳಿದರು.
ಅವರಿಂದು ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಸೈಬರ್ ಅಪರಾಧ ವಿರೋಧಿ ಮಾಸಾಚರಣೆ ಅಂಗವಾಗಿ ಜಾಗೃತಿ ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಿಂದೆ ಶಾಲೆಗೆ ಅಕ್ಷರ ಕಲಿಯಲು ಹೋಗುತ್ತಿದ್ದರು. ಆದರೆ ಪ್ರಸ್ತುತ ಕಂಪ್ಯೂಟರ್ ಶಿಕ್ಷಣವನ್ನು ವಂಚನೆ ಮಾಡಲು, ಹೇಗೆ ಕಳ್ಳತನ ಮಾಡಬೇಕು ಎಂದು ಕಲಿಯಲು ಶಿಕ್ಷಣ ಪಡೆಯಲಾಗುತ್ತಿದೆ. ಬಲಿಪಶು ಮಾಡುವವರು ವಿದ್ಯಾವಂತರೆ, ಬಲಿಪಶು ಆಗುತ್ತಿರುವವರೂ ವಿದ್ಯಾವಂತರೆ ಆಗಿದ್ದಾರೆ ಎಂದರು.
ಇತ್ತೀಚೆಗೆ ರಾಯಚೂರು ಪೊಲೀಸರು ಸೈಬರ್ ವಂಚನೆಯೊಂದನ್ನು ಪತ್ತೆ ಹಚ್ಚಿ 18 ಲಕ್ಷ ರೂ. ಜಪ್ತಿ ಪಡಿಸಿಕೊಂಡಿದ್ದಾರೆ. ಸೈಬರ್ ಪೊಲೀಸರು ಅಪರಾಧಗಳನ್ನು ತಡೆಗಟ್ಟಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಟಿಎಂ ಬ್ಲಾಕ್ ಆಗಿದೆ ಎಂದು ಬ್ಯಾಂಕ್ ನಿಂದ ಕರೆ ಬರುವುದು ಇದೆಲ್ಲ ಸೈಬರ್ ವಂಚನೆಯ ಪ್ರಮುಖ ವಿಷಯಗಳಾಗಿವೆ ಎಂದರು.
ವಾಟ್ಸ್ಯಾಪ್ ಮೂಲಕವೂ ವಿಡಿಯೋ ಕರೆಗಳನ್ನು ಮಾಡಿ, ಸಂದೇಶಗಳನ್ನು ಕಳಿಸಿ ಸೈಬರ್ ವಂಚಕರು ವಂಚನೆ ಮಾಡುತ್ತಾರೆ. ಇದರ ಬಗ್ಗೆ ಜನರು ಜಾಗೃತರಾಗಿರಬೇಕು. ಇಂದು ಹಮ್ಮಿಕೊಂಡಿರುವ ಮ್ಯಾರಥಾನ್ ಓಟದ ಮೂಲಕ ಜನರಲ್ಲಿ ಅರಿವು ಮೂಡಿಸಬೇಕು ಎಂದರು.
ಇದೇ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಮಾತನಾಡಿ, ಇತ್ತೀಚೆಗೆ ಸಮಾಜದಲ್ಲಿ ಚರಾಸ್ತಿಗೆ ಸಂಬಂಧಿಸಿದಂತೆ ಸೈಬರ್ ಪ್ರಕರಣಗಳು ಹೆಚ್ಚಾಗುತ್ತಿವೆ. ಆಧುನಿಕ ತಂತ್ರಜ್ಞಾನ ಸಾಕಷ್ಟು ಮುಂದುವರೆಯುವುದರ ಜೊತೆಗೆ ಸಾಕಷ್ಟು ಅನಾಹುತಗಳಿಗೆ ಕಾರಣವಾಗುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಸೈಬರ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆಧುನಿಕ ತಂತ್ರಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಪರಿಣಾಮ ಅಪರಾಧಗಳು ನಡೆಯುತ್ತಿವೆ. ಅನಗತ್ಯ ಲಿಂಕ್ ಒತ್ತಿ ಎಪಿಕೆ ಅಪ್ಲಿಕೇಷನ್ ಫೈಲ್‍ಗಳನ್ನು ಕ್ಲಿಕ್ ಮಾಡುವುದರಿಂದ ಸೈಬರ್ ವಂಚನೆಗಳು ನಡೆಯುತ್ತವೆ, ಈ ಬಗ್ಗೆ ಜನರು ಜಾಗೃತರಾಗಬೇಕು ಎಂದು ತಿಳಿಸಿದರು.
ಮ್ಯಾರಥಾನ್ ಓಟವು ನಗರದ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಿಂದ ಆರಂಭವಾಗಿ ಗಂಜ್ ವೃತ್ತ, ಚಂದ್ರಮೌಳೇಶ್ವರ ವೃತ್ತ, ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಡಾ.ಬಿ.ಆರ್ ಅಂಬೇಡ್ಕರ್ ವೃತ್ತ, ಸ್ಟೇಷನ್ ರಸ್ತೆ ಮೂಲಕ ರಂಗಮಂದಿರದವರೆಗೆ ನಡೆಯಿತು. ರಂಗಮಂದಿರದಲ್ಲಿ ಮ್ಯಾರಥಾನ್‍ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಸೈಬರ್ ವಂಚನೆ ಕುರಿತಾದ ಸಾಕ್ಷ್ಯ ಚಿತ್ರಗಳನ್ನು ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಪುರುರಾಜ್ ಸಿಂಗ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಕುಮಾರಸ್ವಾಮಿ, ಜಿ.ಹರೀಶ, ಡಿವೈಎಸ್‍ಪಿಗಳಾದ ಶಾಂತವೀರ, ದತ್ತಾತ್ರೆಯ ಕರ್ನಾಡ್, ಪ್ರಮಾನಂದ ಘೋಡ್ಕೆ, ಸೈಬರ್ ಡಿವೈಎಸ್‍ಪಿ ವೆಂಕಟೇಶ ಸೇರಿದಂತೆ ಅನೇಕರಿದ್ದರು.