×
Ad

ಸಾಮಾಜಿಕ ಸಮಾನತೆಯ ಹರಿಕಾರ ಸಿದ್ದರಾಮಯ್ಯ‌ ಅವರು ಎರಡನೇ ಅಂಬೇಡ್ಕರ್ : ಮಾಜಿ ಸಚಿವ ಹೆಚ್.ಆಂಜನೇಯ

Update: 2025-05-24 17:32 IST

ರಾಯಚೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ, ಗುತ್ತಿಗೆದಾರರಿಗೆ ಟೆಂಡರ್ ನಲ್ಲಿ‌ ಮೀಸಲಾತಿ, ಎಸ್ ಸಿಪಿ, ಟಿಎಸ್ ಪಿ ಯೋಜನೆ‌ ಸೇರಿ‌ ಅನೇಕ ಯೋಜನೆಗಳ ಮೂಲಕ ಯಾರು ಮಾಡದಂತಹ ಕ್ರಾಂತಿಕಾರಿ ಕೆಲಸ ಮಾಡಿ ಸಾಮಾಜಿಕ ನ್ಯಾಯದ ಹರಿಕಾರಾಗಿದ್ದಾರೆ ಅವರೇ ನಮ್ಮ ಪಾಲಿಗೆ ಎರಡನೇ ಅಂಬೇಡ್ಕರ್ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಪುನರ್ ಉಚ್ಛರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗಳಿಗೆ ಅನ್ಯಾಯ ಆಗದ ರೀತಿಯಲ್ಲಿ ಒಳಮೀಸಲಾತಿ ಜಾರಿಗೆ ಮುಂದಾಗಿದ್ದು, ದೇಶದಲ್ಲಿಯೇ ಜಾತಿಗಣತಿ ಕಾರ್ಯ ಕೈಗೊಂಡ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈಗಾಗಲೇ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿಗಾಗಿ ಜಾತಿ ಜನಗಣತಿ ಸಮೀಕ್ಷೆ ಕೈಗೊಳ್ಳಲಾಗಿದೆ. ಆರಂಭದಲ್ಲಿ ತಾಂತ್ರಿಕ ದೋಷ, ಸಿಬ್ಬಂದಿಗೆ ಸೂಕ್ತ ತರಬೇತಿಯಿಲ್ಲದ ಕಾರಣದಿಂದ ವಿಳಂಬವಾಗಿತ್ತು. ಈಗ ಮೊಬೈಲ್ ಜಿಪಿಎಸ್ ಆಧಾರಿತ ಆ್ಯಪ್ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ ಎಂದರು.

ಪರಿಶಿಷ್ಟ ಜಾತಿಯಲ್ಲಿರುವ 101 ಉಪಜಾತಿಯವರು ಸಮೀಕ್ಷೆಯಲ್ಲಿ ಭಾಗವಹಿಸಿ, ಉಪಜಾತಿ ಸೇರಿದಂತೆ ಎಲ್ಲ ವಿವರ ದಾಖಲಿಸಬೇಕು. ಇಂದೇ ಹುಟ್ಟಿದ ಮಗುವಿನಿಂದ ವಯಸ್ಸಾದ ಎಲ್ಲರೂ ಕೂಡ ಸಮೀಕ್ಷೆಯಲ್ಲಿ ಪಾಲ್ಗೊಂಡು ಅಗತ್ಯ ಮಾಹಿತಿ ಸಲ್ಲಿಸಬೇಕು' ಎಂದು ಕೋರಿದರು.

ಒಳಮೀಸಲಾತಿ ಜಾರಿಗೆ ಇದ್ದ ಅಡೆತಡೆಗೆ ಸುಪ್ರೀಂ ಕೋರ್ಟ್ ತೆರೆ ಎಳೆದಿದೆ. ಜೊತೆಗೆ ಒಳಮೀಸಲಾತಿ ಜಾರಿಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಲಾಗಿತ್ತು. ಅದರಂತೆ ಈಗ ಜಾರಿಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂದರು.

ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್‌ ಅವರ ಏಕ ಸದಸ್ಯ ಆಯೋಗದಿಂದ ನ್ಯಾಯ ಸಿಗುವ ವಿಶ್ವಾಸ ಇದೆ. ಪರಿಶಿಷ್ಟ ಜಾತಿಯಲ್ಲಿರುವ ಅನೇಕ ಜಾತಿಗಳು ರಾಜಕೀಯ, ಶೈಕ್ಷಣಿಕವಾಗಿ ಬಹಳ ಹಿಂದುಳಿದಿವೆ. ಸಮೀಕ್ಷೆ ಪೂರ್ಣಗೊಂಡ ನಂತರ ಒಳಮೀಸಲಾತಿಯನ್ನು ಸರ್ಕಾರ ಜಾರಿಗೆ ತರುವ ವಿಶ್ವಾಸವಿದೆ. ಆಗ ವಂಚಿತರಿಗೆ ನ್ಯಾಯ ದೊರಕಲಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಎ.ವಸಂತಕುಮಾರ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಿ, ಅಂಬಣ್ಣ ಆರೋಲಿಕರ್, ಪಾಲಿಕೆ ಸದಸ್ಯ ಜಯಣ್ಣ, ನರಸಿಂಹಲು ಮಾಡಗಿರಿ, ರಾಮಣ್ಣ ಇರಬಗೇರಾ, ಬಾಲಸ್ವಾಮಿ ಕೊಡ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News