×
Ad

ಸಿಂಧನೂರು | ವೃದ್ಧೆ ಮೃತ್ಯು: ವೈದ್ಯರ ನಿರ್ಲಕ್ಷ್ಯ ಆರೋಪಿಸಿ ಪ್ರತಿಭಟನೆ

Update: 2026-03-10 20:39 IST

ಸಿಂಧನೂರು: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆಯೊಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ವೈದ್ಯರ ನಿರ್ಲಕ್ಷ್ಯ ಕಾರಣವೆಂದು ಆರೋಪಿಸಿ ಕುಟುಂಬಸ್ಥರು ಮೃತದೇಹವನ್ನು ರಸ್ತೆಯ ಮೇಲೆ ಇಟ್ಟು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ.

ಸಂಗಮ್ಮ ಶಿವಪ್ಪ (80) ಮೃತಪಟ್ಟ ವೃದ್ಧೆ. ಕುಟುಂಬಸ್ಥರು ಮಧ್ಯಾಹ್ನ ಚಿಕಿತ್ಸೆಗಾಗಿ ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ವೈದ್ಯೆ ಡಾ. ಕೊನಿಕಾ ಕಟ್ವಾ ಸರಿಯಾಗಿ ಚಿಕಿತ್ಸೆ ನೀಡಿಲ್ಲದ ಕಾರಣ ವೃದ್ಧೆ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದರು.

ಸಕಾಲಕ್ಕೆ ಆಕ್ಸಿಜನ್ ನೀಡದೆ ಹಾಗೂ ಸರಿಯಾದ ಚಿಕಿತ್ಸೆ ಕೊಡದೆ ನಿರ್ಲಕ್ಷ್ಯ ತೋರಲಾಗಿದೆ ಎಂದು ಆಕ್ರೋಶಗೊಂಡ ಕುಟುಂಬಸ್ಥರು ಮೃತದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆ ಎದುರಿನ ರಾಯಚೂರು ಮುಖ್ಯರಸ್ತೆಯಲ್ಲಿ ಇಟ್ಟು ರಸ್ತೆತಡೆ ನಡೆಸಿದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಕುಟುಂಬಸ್ಥರನ್ನು ಸಮಾಧಾನಪಡಿಸಲು ಹರಸಾಹಸ ಪಟ್ಟರು. ನಂತರ ಮನವೊಲಿಸಿ ಮೃತದೇಹವನ್ನು ಸ್ವಗ್ರಾಮಕ್ಕೆ ರವಾನಿಸಲಾಯಿತು.

ಕುಟುಂಬಸ್ಥರ ಆಕ್ರೋಶದಿಂದ ಆಸ್ಪತ್ರೆ ಎದುರು ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ವೈದ್ಯರು ನಿರ್ಲಕ್ಷ್ಯ ತೋರಿದ್ದು ಮಾತ್ರವಲ್ಲದೆ ಮೃತದೇಹದತ್ತ ಕೂಡ ಗಮನ ಹರಿಸಲಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದರು. ರಸ್ತೆತಡೆಯಿಂದ ಕೆಲ ಗಂಟೆಗಳ ಕಾಲ ಸಂಚಾರಕ್ಕೂ ತೊಂದರೆ ಉಂಟಾಯಿತು.

ಸಂಧಾನ ಪ್ರಯತ್ನ

ಘಟನೆ ಹಿನ್ನೆಲೆಯಲ್ಲಿ ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಪನಗೌಡ ಬಾದರ್ಲಿ ಸೇರಿದಂತೆ ರಾಜಕೀಯ ಮುಖಂಡರು ಹಾಗೂ ಪೊಲೀಸ್ ಅಧಿಕಾರಿಗಳು ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಹಾಗೂ ಕರ್ತವ್ಯನಿರತ ವೈದ್ಯರೊಂದಿಗೆ ಸಭೆ ನಡೆಸಿ ಪರಿಸ್ಥಿತಿ ಶಮನಗೊಳಿಸಲಾಯಿತು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಕೋನಿಕಾ ಕಾಟ್ವಾ, ವೃದ್ಧೆ ಆಸ್ಪತ್ರೆಗೆ ದಾಖಲಾದಾಗ ಅಗತ್ಯ ಚಿಕಿತ್ಸೆ ನೀಡಲಾಗಿದೆ. ದಾಖಲಾದ ಸಂದರ್ಭದಲ್ಲಿ ರೋಗಿಗೆ ಆಕ್ಸಿಜನ್ ಕೊರತೆ ಅಥವಾ ರಕ್ತದೊತ್ತಡ ಸಮಸ್ಯೆ ಕಂಡುಬಂದಿಲ್ಲ. ವಯೋಸಹಜ ಸಮಸ್ಯೆ ಹಾಗೂ ತುರ್ತು ಹೃದಯಾಘಾತದಿಂದ ವೃದ್ಧೆ ಮೃತಪಟ್ಟಿದ್ದಾರೆ. ಆ ಸಮಯದಲ್ಲಿ ತುರ್ತು ಚಿಕಿತ್ಸೆಗೆ ನಾಲ್ವರು ರೋಗಿಗಳು ಒಂದೇ ವೇಳೆ ದಾಖಲಾಗಿದ್ದರು. ಎಲ್ಲರಿಗೂ ಚಿಕಿತ್ಸೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಕ್ಷಮೆಯಾಚಿಸಿದ ಮುಖ್ಯ ವೈದ್ಯಾಧಿಕಾರಿ

ಘಟನೆ ಕುರಿತು ಮಾತನಾಡಿದ ಮುಖ್ಯ ವೈದ್ಯಾಧಿಕಾರಿ ಡಾ.ಸುರೇಶ್ ಗೌಡ, ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿದರೂ ತೀವ್ರ ಹೃದಯಾಘಾತದಿಂದ ವೃದ್ಧೆ ಸಾವನ್ನಪ್ಪಿದ್ದಾರೆ. ಚಿಕಿತ್ಸೆ ವೇಳೆ ವೈದ್ಯರು ಯಾವುದೇ ನಿರ್ಲಕ್ಷ್ಯ ತೋರಿಲ್ಲ. ವೈದ್ಯರು ರೋಗಿಗಳ ಜೀವದ ಬಗ್ಗೆ ಸದಾ ಕಾಳಜಿ ವಹಿಸುತ್ತಾರೆ. ಈ ಘಟನೆಯ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡುತ್ತಾ ಕ್ಷಮೆಯಾಚಿಸಿದರು ಎಂದು ತಿಳಿಸಿದರು.




Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News